ADVERTISEMENT

ಹಾಕಿ ಆಟಗಾರ ಬೇನುಬಾಳು ಭಾಟ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 14:05 IST
Last Updated 16 ಸೆಪ್ಟೆಂಬರ್ 2020, 14:05 IST
ಕುಟುಂಬದೊಂದಿಗೆ ಬೇನುಬಾಳು ಭಾಟ್ –ಪ್ರಜಾವಾಣಿ ಆರ್ಕೈವ್‌ ಚಿತ್ರ
ಕುಟುಂಬದೊಂದಿಗೆ ಬೇನುಬಾಳು ಭಾಟ್ –ಪ್ರಜಾವಾಣಿ ಆರ್ಕೈವ್‌ ಚಿತ್ರ   

ಗದಗ: ಭಾರತೀಯ ರೈಲ್ವೆ ತಂಡದಲ್ಲಿ 11 ವರ್ಷಗಳ ಕಾಲ ಹಲವಾರು ಟೂರ್ನಿಗಳಲ್ಲಿ ಆಡಿದ್ದ ಗದುಗಿನ ಹೆಸರಾಂತ ಹಾಕಿ ಆಟಗಾರ ಬೇನುಬಾಳು ಭಾಟ್ (87) ಬುಧವಾರನಿಧನರಾದರು.

ಮೃತರಿಗೆ ಪತ್ನಿ, ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರ ಇದ್ದಾರೆ. ಹತ್ತು ದಿನಗಳ ಹಿಂದೆಯಷ್ಟೇ ಅವರ ಪತ್ನಿ ನಿಧನರಾಗಿದ್ದರು.

ಆಗಿನ ಮದ್ರಾಸ್‌ನ ಸದರ್ನ್‌ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಬಾಳು ಭಾಟ್ ಚೆಂಡಿನ ಮೇಲೆ ಹಿಡಿತ ಸಾಧಿಸಿ, ಗೋಲು ಗಳಿಸಲು ಮುನ್ನುಗ್ಗುತ್ತಿದ್ದ ಚುರುಕುತನ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಪಾದರಸದಂಥ ವೇಗ ಆಟದ ಆಕರ್ಷಣೆ ಹೆಚ್ಚಿಸಿತ್ತು ಎನ್ನುತ್ತಾರೆ ಅವರ ಸ್ನೇಹಿತರು.

ADVERTISEMENT

ಗದುಗಿನ ಸೆಟ್ಲಮೆಂಟ್‌ ಮೈದಾನದಿಂದಲೇ ಹಾಕಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಬಾಳು ಭಾಟ್ ನಾಲ್ಕು ದಶಕಗಳ ಕಾಲ ಈ ಕ್ರೀಡೆಗಾಗಿಯೇ ಜೀವನ ಮುಡಿಪಾಗಿಟ್ಟಿದ್ದರು. ಸದರ್ನ್ ರೈಲ್ವೆಗೆ 20 ವರ್ಷ ಆಡಿದ್ದಾರೆ. 1960 ಹಾಗೂ 70ರ ದಶಕದಲ್ಲಿ ಕರ್ನಾಟಕದಿಂದ ಗದಗ ಬೆಟಗೇರಿ ಕ್ಲಬ್ ಮತ್ತು ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ (ಎಂಇಜಿ) ತಂಡಗಳು ಆಘಾಖಾನ್‌ ಗೋಲ್ಡ್‌ ಕಪ್‌ ಟೂರ್ನಿಯಲ್ಲಿ ಮುಖ್ಯವಾಗಿ ಪಾಲ್ಗೊಳ್ಳುತ್ತಿದ್ದವು. ಬಾಳು ಭಾಟ್ 1961ರಿಂದ 1974ರ ತನಕ ಗೋಲ್ಡ್ ಕಪ್‌ನಲ್ಲಿ ಆಡಿದ್ದರು.

ರೈಲ್ವೆಯಿಂದ ನಿವೃತ್ತಿಯಾದ ಬಳಿಕ ಜೀವನ ನಿರ್ವಹಣೆಗಾಗಿ ಪೆಟ್ರೋಲ್‌ ಬಂಕ್‌ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಾಧ್ಯಮಗಳ ಮೂಲಕ ಈ ವಿಷಯ ತಿಳಿದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಅವರನ್ನು ಹಾಕಿ ಕೋಚ್‌ ಆಗಿ ನೇಮಿಸಿಕೊಂಡಿತು. ಹತ್ತು ವರ್ಷ ಅವರು ಕ್ರೀಡಾ ಇಲಾಖೆಯಲ್ಲಿ ಕೋಚ್‌ ಆಗಿದ್ದರು. ನಾಲ್ಕು ವರ್ಷಗಳ ಹಿಂದೆ ಅವರು ತೀರಾ ಅನಾರೋಗ್ಯಕ್ಕೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.