ADVERTISEMENT

ರ‍್ಯಾಪಿಡ್‌ ಚೆಸ್ ಟೂರ್ನಿ: ಗೋವಾದ ಗಾಂವ್ಕರ್‌ ಚಾಂಪಿಯನ್, ಧನುಷ್‌ ರನ್ನರ್ ಅಪ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 16:13 IST
Last Updated 17 ಆಗಸ್ಟ್ 2025, 16:13 IST
ಚೆಸ್
ಚೆಸ್   

ಮಂಗಳೂರು: ಕುತೂಹಲ ಕೆರಳಿಸಿದ 8ನೇ ಸುತ್ತಿನಲ್ಲಿ ಸ್ಥಳೀಯ ಪ್ರತಿಭೆಯನ್ನು ಮಣಿಸಿದ ಗೋವಾದ ಚೈತನ್ಯ ವಿ.ಗಾಂವ್ಕರ್ ನಗರದ ಕಿಂಗ್ಸ್ ಚೆಸ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಮಟ್ಟದ 11ನೇ ಕೆಸಿಎ ಟ್ರೋಫಿ ಫಿಡೆ ರೇಟೆಡ್‌ ರ‍್ಯಾಪಿಡ್‌ ಚೆಸ್ ಟೂರ್ನಿಯ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ಬಾಳಂಭಟ್‌ ಸಭಾಂಗಣದಲ್ಲಿ ನಡೆದ ಟೂರ್ನಿಯ ಮೊದಲ ದಿನವಾದ ಶನಿವಾರ ಚೈತನ್ಯ ಮತ್ತು ದಕ್ಷಿಣ ಕನ್ನಡದ ಧನುಷ್ ರಾಮ್ ತಲಾ 7 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನ ಹಂಚಿಕೊಂಡಿದ್ದರು. ಭಾನುವಾರ ಎರಡು ಸುತ್ತುಗಳು ಉಳಿದಿದ್ದವು. ಮೊದಲ ಸುತ್ತಿನ ಪಂದ್ಯದಲ್ಲಿ ಇವರಿಬ್ಬರೂ ಕಾದಾಡಿದರು. ಗೆಲುವಿನೊಂದಿಗೆ ಪ್ರಶಸ್ತಿ ಕಡೆಗಿರುವ ಚೈತನ್ಯ ಅವರ ಹಾದಿ ಸುಲಭವಾಯಿತು. ಕೊನೆಯ ಸುತ್ತಿನಲ್ಲಿ ಅವರು ದಕ್ಷಿಣ ಕನ್ನಡದ ಆರುಷ್ ಭಟ್ ಜೊತೆ ಡ್ರಾ ಮಾಡಿಕೊಂಡರು. ಇದರೊಂದಿಗೆ 8.5 ಪಾಯಿಂಟ್‌ಗಳೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿದರು. ಧನುಷ್ ರಾಮ್ ಅಂತಿಮ ಸುತ್ತಿನಲ್ಲಿ ದಕ್ಷಿಣ ಕನ್ನಡದ ಲಕ್ಷಿತ್ ಸಾಲ್ಯಾನ್ ವಿರುದ್ಧ ಜಯ ಸಾಧಿಸಿ 8 ಪಾಯಿಂಟ್ಸ್ ತಮ್ಮದಾಗಿಸಿಕೊಂಡರು.

ಒಟ್ಟು ₹ 2 ಲಕ್ಷ ಬಹುಮಾನ ಮೊತ್ತದ ಟೂರ್ನಿಯ ಚಾಂಪಿಯನ್‌ ₹ 35,001 ತಮ್ಮದಾಗಿಸಿಕೊಂಡರು. ಧನುಷ್ ರಾಮ್‌ಗೆ ₹ 25,001 ಲಭಿಸಿತು. 7.5 ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡ ಸುದರ್ಶನ್ ಭಟ್ ₹ 15,001 ಗಳಿಸಿದರು. 7.5 ಪಾಯಿಂಟ್‌ ಗಳಿಸಿದರೂ ಉತ್ತಮ ಟೈಬ್ರೇಕರ್‌ನಲ್ಲಿ ಹಿಂದುಳಿದ ಆರುಷ್ ಭಟ್‌ 4ನೇ ಸ್ಥಾನದೊಂದಿಗೆ ₹ 7,500 ಗಳಿಸಿದರು. 

ADVERTISEMENT

ಲಕ್ಷಿತ್ ಸಾಲ್ಯಾನ್‌, ಅಗ್ರ ಶ್ರೇಯಾಂಕಿತ ಅರುಳ್‌ ಆನಂದ್‌, ಪ್ರಹ್ಲಾದ್ ಸೇನ್‌, ರಿತೇಶ್ ಕೆ, ಶರದ್ ಎಸ್ ರೈ ಹಾಗೂ ನಿಹಾಲ್ ಶೆಟ್ಟಿ ತಲಾ 6 ಪಾಯಿಂಟ್ ಗಳಿಸಿ ಕ್ರಮವಾಗಿ 5ರಿಂದ 10ರ ವರೆಗಿನ ಸ್ಥಾನ ಗಳಿಸಿದರು. 

18 ವರ್ಷದೊಳಗಿನವರ ವಿಭಾಗದಲ್ಲಿ ಸಮರ್ಥ ಜೆ ರಾವ್ (7.5 ಪಾಯಿಂಟ್ಸ್), 16 ವರ್ಷದೊಳಗಿನವರ ವಿಭಾಗದಲ್ಲಿ ಶ್ರಿಯಾನ್ಸ್ ಸಿನ್ಹ, 15 ವರ್ಷದೊಳಗಿನವರ ವಿಭಾಗದಲ್ಲಿ ತುಳಸಿ ರೆಡ್ಡಿ ಚಾಂಪಿಯನ್ ಆದರು. ಇವರೆಲ್ಲರೂ ಕರ್ನಾಟಕದವರು. ಮೂವರಿಗೂ ತಲಾ ₹ 12 ಸಾವಿರ ಲಭಿಸಿತು. 

ಡಿಕೆ ಕೆಸಿಎ: ಅನೂಪ್‌ಗೆ ಅಗ್ರಸ್ಥಾನ

ಆತಿಥೇಯ ಕ್ಲಬ್‌ ಪರವಾಗಿ ಅನೂಪ್ ಎ.ರಾವ್ ಅಗ್ರಸ್ಥಾನ ಗಳಿಸಿದರು. 5.5 ಪಾಯಿಂಟ್ ಕಲೆ ಹಾಕಿದ ಅವರಿಗೆ ₹ 3001 ಲಭಿಸಿತು. 3.5 ಪಾಯಿಂಟ್‌ಗಳೊಂದಿಗೆ ಎಲಿನಾ ಲಿವಿಯಾ ಡಿಸೋಜ ಎರಡನೆಯವರಾದರು. ಅವರಿಗೆ ₹ 2001 ಲಭಿಸಿತು. ಅಭಯ್ ನಾಯಕ್‌, ಪುಂಡಲೀಕ ಭಟ್‌ ಮತ್ತು ಕುನಾಲ್ ನಾಗರಾಜ ದೇವಾಡಿಗ ಕ್ರಮವಾಗಿ 3, 4 ಮತ್ತು 5ನೇ ಸ್ಥಾನ ಗಳಿಸಿದರು.

ಭಾನುವಾರ ಪ್ರತ್ಯೇಕವಾಗಿ ನಡೆದ 6 ಸುತ್ತುಗಳ 11ನೇ ಕೆಸಿಎ ಟೂರ್ನಿಯಲ್ಲೂ ಧನುಷ್ ರನ್ನರ್ ಅಪ್ ಆದರು. ಮಹಾರಾಷ್ಟ್ರದ ಅಭಿಷೇಕ್ ಪಾಟೀಲ್ ಚಾಂಪಿಯನ್ ಆದರು. ಇಬ್ಬರೂ ತಲಾ 5.5 ಪಾಯಿಂಟ್ ಗಳಿಸಿದರೂ ಉತ್ತಮ ಟೈಬ್ರೇಕರ್ ಆಧಾರದಲ್ಲಿ ಅಭಿಷೇಕ್ ಪ್ರಶಸ್ತಿ ಗೆದ್ದರು. ಕರ್ನಾಟಕದ ಅರುಳ್ ಆನಂದ್ ಮತ್ತು ಸ್ವರಲಕ್ಷ್ಮಿ ನಾಯರ್ ತಲಾ 5 ಪಾಯಿಂಟ್ ಗಳಿಸಿದರು. ಅರುಳ್‌ಗೆ 3ನೇ ಸ್ಥಾನ ಲಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.