ADVERTISEMENT

ಭಾರತ ಮಹಿಳಾ ಹಾಕಿ ತಂಡಕ್ಕೆ ಆಘಾತ

ಜರ್ಮನಿಗೆ 5–0 ಅಂತರದ ಗೆಲುವು; ಎರಡು ಗೋಲು ಗಳಿಸಿದ ಪಿಯಾ ಮಾರ್ಟೆನ್ಸ್‌

ಪಿಟಿಐ
Published 28 ಫೆಬ್ರುವರಿ 2021, 2:21 IST
Last Updated 28 ಫೆಬ್ರುವರಿ 2021, 2:21 IST
ಹಾಕಿ
ಹಾಕಿ   

ಡಸೆಲ್‌ಡಾರ್ಫ್‌: ಭರವಸೆಯಿಂದ ಜರ್ಮನಿ ಪ್ರವಾಸ ಕೈಗೊಂಡಿರುವ ಭಾರತ ಮಹಿಳಾ ಹಾಕಿ ತಂಡ ಮೊದಲ ಪಂದ್ಯದಲ್ಲೇ ಆಘಾತ ಅನುಭವಿಸಿದೆ. ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಜರ್ಮನಿ ವಿರುದ್ಧ ಶನಿವಾರ ನಡೆದ ಹಣಾಹಣಿಯಲ್ಲಿ ಭಾರತ 0–5ರಿಂದ ಸೋಲು ಕಂಡಿತು.

10 ಮತ್ತು 14ನೇ ನಿಮಿಷಗಳಲ್ಲಿ ಗೋಲು ಗಳಿಸಿದ ಫಾರ್ವರ್ಡ್ ಆಟಗಾರ್ತಿ ಪಿಯಾ ಮಾರ್ಟೆನ್ಸ್‌ ಜರ್ಮನಿಗೆ ಆರಂಭದಲ್ಲೇ ಮುನ್ನಡೆ ಗಳಿಸಿಕೊಟ್ಟರು. ಲೀನಾ ಮೈಕೆಲ್ 20ನೇ ನಿಮಿಷದಲ್ಲಿ, ಪೌಲಿನ್ ಹೆನ್ಸ್‌ 28ನೇ ನಿಮಿಷದಲ್ಲಿ ಮತ್ತು ಲಿಸಾ ಆಲ್ಟೆನ್‌ಬರ್ಗ್ 41ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿದರು.

ಮೊದಲ ಕ್ವಾರ್ಟರ್‌ನಲ್ಲಿ ಎರಡು ಗೋಲುಗಳ ಮುನ್ನಡೆ ಗಳಿಸಿದ ಜರ್ಮನಿ ಎರಡನೇ ಕ್ವಾರ್ಟರ್‌ನಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ರಕ್ಷಣಾ ವಿಭಾಗವನ್ನು ಸತತವಾಗಿ ಕಾಡಿದ ತಂಡ 17ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಆದರೆ ಗೋಲು ಬಿಟ್ಟುಕೊಡದ ಭಾರತದ ಆಟಗಾರ್ತಿಯರು ಪ್ರತಿ ಹೋರಾಟ ನಡೆಸಿದರು. ಹೀಗಾಗಿ ಮರುನಿಮಿಷದಲ್ಲೇ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಇದನ್ನು ಆತಿಥೇಯರು ವಿಫಲಗೊಳಿಸಿದರು.

ADVERTISEMENT

4–0 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಜರ್ಮನಿ ಪಾಳಯಕ್ಕೆ ದ್ವಿತೀಯಾರ್ಧದಲ್ಲಿ ಭಾರತ ಆತಂಕ ಒಡ್ಡಿತು. ಆದರೆ 40ನೇ ನಿಮಿಷದಲ್ಲಿ ಜರ್ಮನಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಇದನ್ನು ಭಾರತ ವಿಫಲಗೊಳಿಸಿತು. ಮರುನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 5–0ಗೆ ಏರಿಸಿತು.

ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ಇನ್ನಷ್ಟು ಪ್ರಬಲ ದಾಳಿಯೊಂದಿಗೆ ಗೋಲು ಗಳಿಸಲು ಪ್ರಯತ್ನಿಸಿತು. 47 ಮತ್ತು 50ನೇ ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನೂ ಪಡೆದುಕೊಂಡಿತು. ಆದರೆ ಜರ್ಮನಿಯ ರಕ್ಷಣಾ ಗೋಡೆಯನ್ನು ಕೆಡವಲು ತಂಡಕ್ಕೆ ಸಾಧ್ಯವಾಗಲಿಲ್ಲ. ಎರಡನೇ ಪಂದ್ಯ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.