ADVERTISEMENT

ಗ್ಲೋಬಲ್ ಚೆಸ್‌ ಲೀಗ್‌: ಪಿಬಿಜಿ ಪಾಲಾದ ಗುಕೇಶ್‌, ಅರ್ಜುನ್

ಪಿಟಿಐ
Published 26 ಸೆಪ್ಟೆಂಬರ್ 2025, 14:03 IST
Last Updated 26 ಸೆಪ್ಟೆಂಬರ್ 2025, 14:03 IST
   

ಮುಂಬೈ: ಭಾರತದ ಅಗ್ರ ಗ್ರ್ಯಾಂಡ್‌ಮಾಸ್ಟರ್‌ಗಳಾದ ಡಿ.ಗುಕೇಶ್ ಮತ್ತು ಅರ್ಜುನ್ ಇರಿಗೇಶಿ ಅವರು ಮುಂಬರುವ ಗ್ಲೋಬಲ್ ಚೆಸ್‌ ಲೀಗ್‌ನಲ್ಲಿ ಪಿಬಿಜಿ ಅಲಾಸ್ಕನ್ ನೈಟ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮೂರನೇ ಆವೃತ್ತಿಗೆ ಆಟಗಾರರನ್ನು ವಿವಿಧ ಫ್ರಾಂಚೈಸಿಗಳು ಸೆಳೆದುಕೊಂಡವು.

ಟೆಕ್‌ ಮಹೀಂದ್ರ ಮತ್ತು ಫಿಡೆ ಸೇರಿಕೊಂಡು ಗ್ಲೋಬಲ್ ಚೆಸ್‌ ಲೀಗ್ (ಜಿಸಿಎಲ್‌) ನಡೆಸುತ್ತಿವೆ. ಡಿಸೆಂಬರ್‌ 13 ರಿಂದ 24ರವರೆಗೆ ನಡೆಯಲಿರುವ ಲೀಗ್‌ನಲ್ಲಿ ಆರು ತಂಡಗಳು ಭಾಗವಹಿಸುತ್ತಿವೆ.

ಐಕಾನ್ ಸುತ್ತಿನಲ್ಲಿ ಅಲ್ಪೈನ್ ಎಸ್‌ಜಿ ಪೈಪರ್ಸ್ ತಂಡ, ಅಮೆರಿಕದ ಜಿಎಂ ಫ್ಯಾಬಿಯಾನೊ ಕರುವಾನ ಅವರನ್ನು ಪಡೆಯಿತು. ಅನಿಶ್ ಗಿರಿ ಅವರನ್ನು ತಂಡ ಉಳಿಸಿಕೊಂಡಿತು.

ADVERTISEMENT

ಅಲಾಸ್ಕನ್ ನೈಟ್ಸ್, ಇತರ ಫ್ರಾಂಚೈಸಿಗಳನ್ನು ಹಿಮ್ಮೆಟ್ಟಿಸಿ ಗುಕೇಶ್ ಅವರನ್ನು ಪಡೆಯುವಲ್ಲಿ ಯಶಸ್ವಿ ಆಯಿತು.

ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಗ್ಯಾಂಜೆಸ್‌ ಗ್ರ್ಯಾಂಡ್‌ಮಾಸ್ಟರ್ಸ್‌ ತಂಡದಲ್ಲಿ ಮುಂದುವರಿಯಲಿದ್ದಾರೆ. 20 ವರ್ಷ ವಯಸ್ಸಿನ ವಿನ್ಸೆಂಟ್ ಕೀಮರ್ ಸಹ ಇದೇ ತಂಡದ ಪಾಲಾದರು.

ಇರಿಗೇಶಿ ಅವರನ್ನು ಪಡೆಯಲು ಮೂರು ತಂಡಗಳು ಪೈಪೋಟಿಯಲ್ಲಿದ್ದು, ಅಂತಿಮವಾಗಿ ಪಿಬಿಜಿ ಅಲಾಸ್ಕ್‌ ನೈಟ್ಸ್ ತಂಡದ ಪಾಲಾದರು.

ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ವೆಸ್ಲಿ ಸೊ ಅವರಿಗೂ ಬೇಡಿಕೆಯಿದ್ದು, ಅಪ್‌ಗ್ರಾಡ್‌ ಮುಂಬಾ ಮಾಸ್ಟರ್ಸ್‌ ಅವರನ್ನು ಸೇರ್ಪಡೆ ಮಾಡಿಕೊಂಡಿತು.

ಅಲ್ಪೈನ್‌ ಎಸ್‌ಜಿ ತಂಡ ಹೌ ಇಫಾನ್ ಮತ್ತು ಪ್ರಜ್ಞಾನಂದ ಅವರನ್ನು ರೀಟೇನ್ ಮಾಡಿಕೊಂಡಿತು. ಅಮೆರಿಕನ್ ಗ್ಯಾಂಬಿಟ್ಸ್ ತಂಡವು ಹಿಕಾರು ನಕಾಮುರ ಮತ್ತು ಬಿಬಿಸಾರಾ ಅಸೌಬಯೇವಾ ಅವರನ್ನು ತನ್ನ ಪಾಲು ಮಾಡಿಕೊಂಡಿತು.

ಪ್ರತಿ ತಂಡದಲ್ಲಿ ಒಬ್ಬ ಐಕಾನ್‌ ಆಟಗಾರ, ಒಬ್ಬ ಆಟಗಾರ್ತಿ, ಒಬ್ಬ ಆಟಗಾರ, 21 ವರ್ಷದೊಳಗಿನ ಒಬ್ಬ ಆಟಗಾರರಿರುವುದು ಕಡ್ಡಾಯ.

ಮುಂಬಾ ಮಾಸ್ಟರ್ಸ್ ತಂಡವು ಜಿಎಂ ಕೋನೇರು ಹಂಪಿ, ದ್ರೋಣವಲ್ಲಿ ಹಾರಿಕಾ, ಮ್ಯಾಕ್ಸಿಮ್ ವೇಷಿಯರ್ ಲಗ್ರಾವ್‌ ಅವರನ್ನು ಉಳಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.