ADVERTISEMENT

ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌: ರಿಧಿಮಾ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 12:56 IST
Last Updated 17 ಜೂನ್ 2022, 12:56 IST
ರಿಧಿಮಾ ದಿಲಾವರಿ
ರಿಧಿಮಾ ದಿಲಾವರಿ   

ಬೆಂಗಳೂರು: ನವದೆಹಲಿಯ ರಿಧಿಮಾ ದಿಲಾವರಿ ಅವರು ಶುಕ್ರವಾರ ಇಲ್ಲಿ ಕೊನೆಗೊಂಡ ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ನ ಎಂಟನೇ ಲೆಗ್‌ನ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಈ ಮೂಲಕ ಸುದೀರ್ಘ ಅವಧಿಯ ಪ್ರಶಸ್ತಿ ಬರ ನೀಗಿಸಿಕೊಂಡರು.

ಅಂತಿಮ ಸುತ್ತಿನಲ್ಲಿ 72 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದ ರಿಧಿಮಾ ಒಟ್ಟಾರೆ 215 ಸ್ಕೋರ್‌ಗಳೊಂದಿಗೆ (69–74–72) ಅಗ್ರಸ್ಥಾನ ಪಡೆದರು. 2021ರ ಜನವರಿ ಮತ್ತು ಡಿಸೆಂಬರ್‌ನಲ್ಲಿ ಪ್ರಶಸ್ತಿ ಜಯಿಸಿದ್ದು ಬಿಟ್ಟರೆ, ರಿಧಿಮಾ ಅವರಿಗೆ ಇತರ ಟೂರ್ನಿಗಳಲ್ಲಿ ಅದೃಷ್ಟ ಕೈಕೊಟ್ಟಿತ್ತು.

ಮೂರು ಸುತ್ತುಗಳ ಬಳಿಕ ತಲಾ 219 ಸ್ಕೋರ್‌ಗಳನ್ನು ಮಾಡಿದ ಜಾಹ್ನವಿ ಬಕ್ಷಿ, ಸೆಹೆರ್‌ ಅತ್ವಾಲ್‌ ಮತ್ತು ಪ್ರಣವಿ ಅರಸ್‌ ಅವರು ಜಂಟಿ ಎರಡನೇ ಸ್ಥಾನ ಪಡೆದುಕೊಂಡರು.

ADVERTISEMENT

ಗುರುವಾರ ರಿಧಿಮಾ ಜತೆ ಜಂಟಿ ಮುನ್ನಡೆಯಲ್ಲಿದ್ದ ಮೈಸೂರಿನ ಪ್ರಣವಿ , ಅಂತಿಮ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅವರು ಸ್ಪರ್ಧೆ ಕೊನೆಗೊಳಿಸಲು 76 ಅವಕಾಶಗಳನ್ನು ತೆಗೆದುಕೊಂಡರು. ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ 74, 69 ಸ್ಕೋರ್‌ಗಳನ್ನು ಮಾಡಿದ್ದರು.

ಸೆಹೆರ್‌ ಅತ್ವಾಲ್‌ (76–71–72) ಮತ್ತು ಜಾಹ್ನವಿ ಬಕ್ಷಿ (73–74–72) ಕೊನೆಯ ದಿನ ಗಮನಾರ್ಹ ಪ್ರದರ್ಶನ ನೀಡಿ ತಮ್ಮ ಸ್ಥಾನ ಉತ್ತಮಪಡಿಸಿಕೊಂಡರು. ಅಫ್ಶಾನ್‌ ಫಾತಿಮಾ ಮತ್ತು ಸಿದ್ಧಿ ಕಪೂರ್‌ ಜಂಟಿ ಐದನೇ ಸ್ಥಾನ ಹಾಗೂ ಅಗ್ರಿಮಾ ಮನ್ರಲ್ ಏಳನೇ ಸ್ಥಾನ ಗಳಿಸಿದರು.

ಮಹಿಳಾ ಪ್ರೊ ಗಾಲ್ಫ್‌ ಟೂರ್‌ನಕೊನೆಯಎರಡುಲೆಗ್‌ನಟೂರ್ನಿ ಮುಂದಿನ ತಿಂಗಳು ಕ್ರಮವಾಗಿ ಬೆಂಗಳೂರು ಗಾಲ್ಫ್‌ ಕ್ಲಬ್‌ ಮತ್ತು ಪ್ರೆಸ್ಟೀಜ್‌ ಗಾಲ್ಫ್‌ಶೈರ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.