ADVERTISEMENT

ಕರ್ನಾಟಕದಲ್ಲಿ 31 ಖೇಲೊ ಇಂಡಿಯಾ ಕೇಂದ್ರ

ಪಿಟಿಐ
Published 25 ಮೇ 2021, 16:25 IST
Last Updated 25 ಮೇ 2021, 16:25 IST
ಬ್ಯಾಸ್ಕೆಟ್‌ಬಾಲ್‌ ತರಬೇತಿಗೆ ಆಯ್ಕೆಯಾಗಿರುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣ
ಬ್ಯಾಸ್ಕೆಟ್‌ಬಾಲ್‌ ತರಬೇತಿಗೆ ಆಯ್ಕೆಯಾಗಿರುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣ   

ನವದೆಹಲಿ: ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಒಟ್ಟು 143 ಖೇಲೊ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಕ್ರೀಡಾ ಇಲಾಖೆ ನಿರ್ಧರಿಸಿದ್ದು ಇದಕ್ಕಾಗಿ ₹14.30 ಕೋಟಿ ವೆಚ್ಚ ಮಾಡಲಿದೆ.

ತಳಮಟ್ಟದಲ್ಲಿ ಕ್ರೀಡಾ ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ಕರ್ನಾಟಕದ 31 ಜಿಲ್ಲೆಗಳಲ್ಲೂ ಕೇಂದ್ರಗಳು ತಲೆ ಎತ್ತಲಿವೆ. ಮಹಾರಾಷ್ಟ್ರ, ಮಿಜೋರಾಂ, ಗೋವಾ, ಮಧ್ಯಪ್ರದೇಶ, ಅರುಣಾಚಲಪ್ರದೇಶ ಮತ್ತು ಮಣಿಪುರ ಆಯ್ಕೆಯಾಗಿರುವ ಇತರ ರಾಜ್ಯಗಳು. ಪ್ರತಿ ಕೇಂದ್ರದಲ್ಲೂ ಒಂದು ಕ್ರೀಡೆಯಲ್ಲಿ ವಿಶೇಷವಾಗಿ ತರಬೇತಿ ನೀಡಲು ನಿರ್ಧರಿಸಲಾಗಿದೆ.

‘2028ರ ಒಲಿಂಪಿಕ್ಸ್‌ ವೇಳೆಗೆ ಕ್ರಿಡಾ ಕ್ಷೇತ್ರದಲ್ಲಿ ಭಾರತ ಪ್ರಮುಖ 10 ರಾಷ್ಟ್ರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕೆಂಬುದು ಸರ್ಕಾರದ ಉದ್ದೇಶ. ಇದು ಸಾಧ್ಯವಾಗಬೇಕಾದರೆ ಸಣ್ಣ ವಯಸ್ಸಿನಲ್ಲೇ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಬೇಕು. ಖೇಲೊ ಇಂಡಿಯಾ ಕೇಂದ್ರಗಳು ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ’ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

’ಜಿಲ್ಲಾ ಮಟ್ಟದ ಖೇಲೊ ಇಂಡಿಯಾ ಕೇಂದ್ರಗಳಲ್ಲಿ ಸಮರ್ಥ ಕೋಚ್‌ಗಳು ಮತ್ತು ಉತ್ತಮ ಸೌಲಭ್ಯಗಳು ಲಭ್ಯವಾದರೆ ಪ್ರತಿಭಾ ಶೋಧ ಸುಲಭವಾಗಿ ನಡೆಯಲಿದೆ’ ಎಂದು ಅವರು ಹೇಳಿದ್ದಾರೆ.

ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಖೇಲೊ ಇಂಡಿಯಾ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ನಾಲ್ಕು ವರ್ಷಗಳಲ್ಲಿ ಒಂದು ಸಾವಿರ ಕೇಂದ್ರಗಳನ್ನು ತೆರೆಯುವುದಾಗಿ 2020ರ ಜೂನ್‌ನಲ್ಲಿ ಕ್ರೀಡಾ ಇಲಾಖೆ ಹೇಳಿತ್ತು. ವಿವಿಧ ರಾಜ್ಯಗಳಲ್ಲಿ ಈಗಾಗಲೇ 217 ಕೇಂದ್ರಗಳನ್ನು ಆರಂಭಿಸಲಾಗಿದೆ. ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಲಕ್ಷದ್ವೀಪ, ಲಡಾಖ್‌ನ ಪ್ರತಿ ಜಿಲ್ಲೆಯಲ್ಲಿ ಎರಡು ಕೇಂದ್ರಗಳ ಸ್ಥಾಪನೆಯಾಗಿದೆ.

ಮಹಾರಾಷ್ಟ್ರದಲ್ಲಿ 36 ಕೇಂದ್ರಗಳು
ಈ ಬಾರಿ ಮಹಾರಾಷ್ಟ್ರದ 30 ಜಿಲ್ಲೆಗಳಲ್ಲಿ 36 ಕೇಂದ್ರಗಳನ್ನು ತೆರೆಯಲು ಮತ್ತು ಅರುಣಾಚಲಪ್ರದೇಶದ 26 ಜಿಲ್ಲೆಗಳಲ್ಲಿ 52 ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇವೆರಡು ರಾಜ್ಯಗಳನ್ನು ಬಿಟ್ಟರೆ ಕರ್ನಾಟಕಕ್ಕೆ ಹೆಚ್ಚು ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಕೋಚ್‌ಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.

ಕೋಚ್‌ಗಳ ಶೀಘ್ರ ನೇಮಕಕ್ಕೆ ಸೂಚನೆ
ಪ್ರತಿ ಕೇಂದ್ರಗಳಿಗೂ ಆಯಾ ವಿಭಾಗದಲ್ಲಿ ಸಾಧನೆ ಮಾಡಿರುವವರನ್ನು ಕೋಚ್‌ ಅಥವಾ ಪೋಷಕರನ್ನಾಗಿ ನೇಮಕ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಖೇಲೊ ಇಂಡಿಯಾ ಯೋಜನೆಯ ಹಿರಿಯ ನಿರ್ದೇಶಕ ಸತ್ಯನಾರಾಯಣ ಮೀನಾ ಸೂಚಿಸಿದ್ದಾರೆ.

ಪ್ರತಿ ಕೇಂದ್ರದಲ್ಲೂ ಪುರುಷ ಮತ್ತು ಮಹಿಳಾ ತರಬೇತುದಾರರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.