ADVERTISEMENT

ಸಿಂಕ್ವೆಫೀಲ್ಡ್‌ ಚೆಸ್‌: ಮುನ್ನಡೆ ಹೆಚ್ಚಿಸಿಕೊಂಡ ಅಲಿರೇಝಾ

ಪ್ರಜ್ಞಾನಂದ, ಗುಕೇಶ್‌ ಪಂದ್ಯಗಳು ಡ್ರಾ

ಪಿಟಿಐ
Published 27 ಆಗಸ್ಟ್ 2024, 13:48 IST
Last Updated 27 ಆಗಸ್ಟ್ 2024, 13:48 IST
ಅಲಿರೇಜಾ ಫಿರೋಜ್
ಅಲಿರೇಜಾ ಫಿರೋಜ್   

ಸೇಂಟ್‌ ಲೂಯಿ (ಅಮೆರಿಕ): ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಸಿಂಕ್ವೆಫೀಲ್ಡ್‌ ಚೆಸ್‌ ಚಾಂಪಿಯನ್‌ಷಿಪ್‌ನ ಏಳನೇ ಸುತ್ತಿನ ಪಂದ್ಯವನ್ನೂ ಡ್ರಾ ಮಾಡಿಕೊಂಡರು. ಅಗ್ರ ಶ್ರೇಯಾಂಕ ಪಡೆದ ಸ್ಥಳೀಯ ಆಟಗಾರ ಫ್ಯಾಬಿಯಾನೊ ಕರುವಾನ ಜೊತೆ ಅವರು ಪಾಯಿಂಟ್‌ ಹಂಚಿಕೊಳ್ಳುವ ಒಪ್ಪಂದಕ್ಕೆ ಗುರುವಾರ ಸಹಿ ಮಾಡಿದರು.

ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ (ಚೀನಾ) ಅವರನ್ನು ಸೋಲಿಸುವ ಮೂಲಕ ಫ್ರಾನ್ಸ್‌ನ ಅಲಿರೇಜಾ ಫಿರೋಜ್ ತಮ್ಮ ಅಗ್ರಸ್ಥಾನದ ಅಂತರವನ್ನು ಸೋಮವಾರ ಒಂದು ಪಾಯಿಂಟ್‌ಗೆ ಹೆಚ್ಚಿಸಿದರು. ಇನ್ನು ಎರಡು ಸುತ್ತಿನ ಪಂದ್ಯಗಳು ಬಾಕಿಯಿವೆ.

ಭಾರತದ ಇನ್ನೊಬ್ಬ ಆಟಗಾರ ಆರ್‌.ಪ್ರಜ್ಞಾನಂದ ಅವರು ಏಳನೇ ಸುತ್ತಿನಲ್ಲಿ ಇಯಾನ್‌ ನಿಪೊಮ್‌ನಿಯಾಷಿ ಜೊತೆ ಬೇಗನೇ, ಕೇವಲ 19 ನಡೆಗಳಲ್ಲಿ ಡ್ರಾ ಮಾಡಿಕೊಂಡರು. ಪ್ರಜ್ಞಾನಂದ ಮತ್ತು ಗುಕೇಶ್ ಈ ಟೂರ್ನಿಯಲ್ಲಿ ಎಲ್ಲ ಏಳೂ ಪಂದ್ಯಗಳನ್ನು ಡ್ರಾ ಮಾಡಿದಂತಾಗಿದೆ.

ADVERTISEMENT

ಅಲಿರೇಜಾ ಐದು ಪಾಯಿಂಟ್ಸ್‌ ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದಾರೆ. ಕರುವಾನ ನಾಲ್ಕು ಪಾಯಿಂಟ್ಸ್ ಕಲೆಹಾಕಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಐವರು– ಅಮೆರಿಕದ ವೆಸ್ಲಿ ಸೊ, ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್‌, ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌, ಭಾರತ ಡಿ.ಗುಕೇಶ್ ಮತ್ತು ಪ್ರಜ್ಞಾನಂದ ತಲಾ 3.5 ಪಾಯಿಂಟ್ಸ್‌ ಸಂಗ್ರಹಿಸಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

‌ಲಿರೆನ್ ಮತ್ತು ರಷ್ಯಾದ ಇಯಾನ್‌ ನಿಪೊಮ್‌ನಿಯಾಷಿ ತಲಾ ಮೂರು ಪಾಯಿಂಟ್ಸ್ ಪಡೆದಿದ್ದರೆ, ಡಚ್‌ ಆಟಗಾರ ಅನಿಶ್ ಗಿರಿ (2.5) ಕೊನೆಯಸ್ಥಾನದಲ್ಲಿದ್ದಾರೆ.

ಅಬ್ದುಸತ್ತಾರೋವ್ ಅವರು ಅಮೆರಿಕದ ವೆಸ್ಲಿ ಸೊ ಅವರ ಯಶಸ್ಸಿನ ಓಟಕ್ಕೆ ತೆರೆಯೆಳೆದು ಪೂರ್ಣ ಪಾಯಿಂಟ್ ಪಡೆದರು. ವೇಷಿಯರ್ ಲಗ್ರಾವ್ ಮತ್ತು ನೆದರ್ಲೆಂಡ್ಸ್‌ನ ಅನಿಶ್ ಗಿರಿ ನಡುವಣ ಪಂದ್ಯ ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.