ADVERTISEMENT

ಸೇಂಟ್‌ ಲೂಯಿ ಚೆಸ್‌: ಮುನ್ನಡೆಯಲ್ಲಿ ಅಲಿರೇಜಾ

ಪಿಟಿಐ
Published 16 ಆಗಸ್ಟ್ 2024, 14:05 IST
Last Updated 16 ಆಗಸ್ಟ್ 2024, 14:05 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಸೇಂಟ್‌ ಲೂಯಿಸ್‌ (ಅಮೆರಿಕ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಅವರ ನಿರಾಶೆಯ ಪ್ರದರ್ಶನ ಬ್ಲಿಟ್ಜ್‌ ವಿಭಾಗದಲ್ಲೂ ಮುಂದುವರಿಯಿತು. ಸೇಂಟ್‌ ಲೂಯಿ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯ ಬ್ಲಿಟ್ಜ್ ಮೊದಲ 9 ಪಂದ್ಯಗಳ ನಂತರ ಅವರು ಕೊನೆಯ ಸ್ಥಾನದಲ್ಲೇ ಇದ್ದಾರೆ.

ರ್‍ಯಾಪಿಡ್‌ ವಿಭಾಗದಲ್ಲಿ ಕೊನೆಯವರಾಗಿದ್ದ ಅವರು ಬ್ಲಿಟ್ಜ್ ಸ್ಪರ್ಧೆಗಳ ಮೊದಲ ದಿನವಾದ ಗುರುವಾರ 9 ಪಂದ್ಯಗಳ ಪೈಕಿ ಎರಡು ಗೆದ್ದು, ಒಂದು ಡ್ರಾ ಮಾಡಿಕೊಂಡು ಉಳಿದ ಆರನ್ನು ಸೋತರು. ಬ್ಲಿಟ್ಜ್‌ನಲ್ಲಿ ಇನ್ನು ಅಂತಿಮ 9 ಸುತ್ತುಗಳ ಪಂದ್ಯಗಳು ಬಾಕಿಯಿವೆ. ಅವರು ಒಟ್ಟು ಆರೂವರೆ ಅಂಕಗಳನ್ನಷವ್ಟೇ ಪಡೆದಿದ್ದಾರೆ.

ಬುಧವಾರ ರ‍್ಯಾಪಿಡ್ ವಿಭಾಗದಲ್ಲಿ ಮುನ್ನಡೆಯಲ್ಲಿದ್ದ ರಷ್ಯಾದ ಇಯಾನ್ ನಿಪೊಮ್‌ನಿಷಿ ಮತ್ತು ಅಮೆರಿಕದ ಹಿಕಾರ ನಕಾಮುರಾ ವಿರುದ್ಧ ಜಯಗಳಿಸಿದ ಅವರು ಈಗ ಮುನ್ನಡೆಯಲ್ಲಿರುವ ಅಲಿರೇಜಾ ಫಿರೋಜ್‌ ಜೊತೆ ‘ಡ್ರಾ’ ಮಾಡಿಕೊಂಡರು.

ADVERTISEMENT

ಅಲಿರೇಜಾ ಒಟ್ಟು 17.5 ಪಾಯಿಟ್ಸ್‌ ಕಲೆಹಾಕಿದ್ದು, ಎರಡನೇ ಸ್ಥಾನದಲ್ಲಿರುವ ವೆಸ್ಲಿ ಸೊ ಮತ್ತು ನಿಪೊಮ್‌ನಿಷಿ ಅವರಿಗಿಂತ 1.5 ಪಾಯಿಂಟ್ಸ್‌ ಹೆಚ್ಚು ಹೊಂದಿದ್ದಾರೆ. ಬ್ಲಿಟ್ಜ್‌ ವಿಭಾಗದಲ್ಲಿ ವೆಸ್ಲಿ ಸೊ ಉತ್ತಮ ಪ್ರದರ್ಶನ ನೀಡಿ 9 ಪಂದ್ಯಗಳ ಪೈಕಿ ಏಳನ್ನು ಗೆದ್ದರು.

ಮ್ಯಾಕ್ಸಿಂ ವೇಷಿಯರ್ ಲಗ್ರಾವ್ (15.5) ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಅರ್ಮೆನಿಯಾ ಮೂಲದ ಅಮೆರಿಕ ಆಟಗಾರ ಲೆವೊನ್ ಅರೋನಿಯನ್ (15) ನಂತರದ ಸ್ಥಾನದಲ್ಲಿದ್ದಾರೆ. ಹಿಕಾರು ನಕಾಮುರಾ (13.5) ಮತ್ತು ಫ್ಯಾಬಿಯಾನೊ ಕರುವಾನಾ ಅವರು ಕ್ರಮವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿದ್ದಾರೆ. ಲೀನಿಯರ್‌ ಡೊಮಿಂಜೆಝ್‌ (ಅಮೆರಿಕ, 12), ನಾಡಿರ್ಬೆಕ್ ಅಬ್ದುಸತ್ತಾರೋವ್ (ಉಜ್ಬೇಕಿಸ್ತಾನ, 10) ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ (6.5) ಕೊನೆಯವರಾಗಿದ್ದಾರೆ.

ಈ ಟೂರ್ನಿಯು ಐದು ಟೂರ್ನಿಗಳನ್ನು ಒಳಗೊಂಡ ಗ್ರ್ಯಾಂಡ್‌ ಚೆಸ್ ಟೂರ್‌ ಸರಣಿಯ ಭಾಗವಾಗಿದೆ. ಈ ಸರಣಿಯ ಕೊನೆಯ ಟೂರ್ನಿಯಾಗಿರುವ ಸಿಂಕ್ವೆಫೀಲ್ಡ್‌ ಕಪ್‌ ಆಗಸ್ಟ್‌ 18ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.