ADVERTISEMENT

ಪ್ರೊ ಕಬಡ್ಡಿ ಲೀಗ್‌: ಗುಜರಾತ್ ಜೈಂಟ್ಸ್‌ಗೆ ಫಝಲ್ ಸಾರಥ್ಯ

ಪಿಟಿಐ
Published 23 ನವೆಂಬರ್ 2023, 16:18 IST
Last Updated 23 ನವೆಂಬರ್ 2023, 16:18 IST
ಫಝಲ್ ಅತ್ರಾಚಲಿ
ಫಝಲ್ ಅತ್ರಾಚಲಿ   

ನವದೆಹಲಿ: ಇರಾನ್‌ನ ರಕ್ಷಣೆ ಆಟಗಾರ ಫಝಲ್ ಅತ್ರಾಚಲಿ ಅವರು ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿಯ ಕಬಡ್ಡಿ ಲೀಗ್‌ ಡಿ.2ರಿಂದ ಫೆ.21ರ ವರೆಗೆ ನಡೆಯಲಿದೆ.

ರಾಮ್ ಮೆಹರ್ ಸಿಂಗ್ ಕೋಚ್ ಆಗಿರುವ ತಂಡಕ್ಕೆ ಉಪ ನಾಯಕರಾಗಿ ರೋಹಿತ್ ಗುಲಿಯಾ ಅವರನ್ನು ನೇಮಿಸಲಾಗಿದೆ.‌ ಜೈಂಟ್ಸ್‌ ತಂಡವು ಅಹಮದಾಬಾನ್‌ನ ತವರು ಮೈದಾನದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಅಭಿಯಾನ ಆರಂಭಿಸಲಿದೆ.

ಜೈಂಟ್ಸ್‌ ತಂಡವು 2017 ಮತ್ತು 2018ರಲ್ಲಿ ಫೈನಲ್‌ ಪ್ರವೇಶ ಪಡೆದಿತ್ತು. ಈ ಬಾರಿ ಚೊಚ್ಚಲ ಪ್ರಶಸ್ತಿ ಜಯಿಸುವ ಗುರಿಯೊಂದಿಗೆ ಹೊಸ ತಂಡವನ್ನು ರಚಿಸಲಾಗಿದೆ.

ADVERTISEMENT

31 ವರ್ಷದ ಫಝಲ್ ಅವರು 2017ರ ಆವೃತ್ತಿಯಲ್ಲಿ ಫೈನಲ್‌ ತಲುಪಿದ ಜೈಂಟ್ಸ್‌ ತಂಡದ ಭಾಗವಾಗಿದ್ದರು. ಅವರು ಎರಡು ಬಾರಿ ಪ್ರೊ ಕಬಡ್ಡಿ ವಿಜೇತ ತಂಡದಲ್ಲಿ ಮತ್ತು ಮೂರು ಬಾರಿ ಏಷ್ಯನ್‌ ಕ್ರೀಡಾಕೂಟದ ಪದಕ ವಿಜೇತ ತಂಡದಲ್ಲಿ ಆಡಿದ್ದಾರೆ. ಅವರನ್ನು ಈ ಬಾರಿ ಗುಜರಾತ್‌ ಜೈಂಟ್ಸ್ ತಂಡ ₹1.60 ಕೋಟಿಗೆ ತೆಕ್ಕೆಗೆ ಹಾಕಿಕೊಂಡಿತ್ತು.

‘ಫಝಲ್‌ ಅವರು ಶ್ರೇಷ್ಠ ಆಟಗಾರನಾಗಿದ್ದು, ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪದಕಗಳನ್ನು ಗೆದ್ದಿದ್ದಾರೆ. ಆ ಅನುಭವವನ್ನು ಧಾರೆಯೆರೆದು ತಂಡವನ್ನು ಸಮರ್ಥವಾಗಿ ಮುನ್ನಡೆಸುವ ವಿಶ್ವಾಸವಿದೆ’ ಎಂದು ಕೋಚ್‌ ರಾಮ್ ಮೆಹರ್ ಸಿಂಗ್ ತಿಳಿಸಿದ್ದಾರೆ.

ನವೀನ್ ನಾಯಕ: ದಬಾಂಗ್ ಡೆಲ್ಲಿ ತಂಡಕ್ಕೆ ರೈಡರ್‌ ನವೀನ್ ಕುಮಾರ್ ಗೋಯತ್ ಅವರು ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.