ಡಿ.ಗುಕೇಶ್, ಡಿಂಗ್ ಲಿರೆನ್
(ಪಿಟಿಐ ಚಿತ್ರ)
ಸಿಂಗಪುರ: ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಗೆಲುವಿಗೆ ತಮ್ಮೆಲ್ಲಾ ಪ್ರಯತ್ನ ಹಾಕಿದರೂ, ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರ ಚಾಚೂತಪ್ಪದ ರಕ್ಷಣೆಯ ಆಟದೆದುರು ಅನ್ಯಮಾರ್ಗವಿಲ್ಲದೇ ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ವಿಶ್ವ ಚೆಸ್ ಚಾಂಪಿಯನ್‌ಷಿಪ್ ಫೈನಲ್‌ನ 13ನೇ ಪಂದ್ಯ ಬುಧವಾರ 68 ನಡೆಗಳಷ್ಟು ದೀರ್ಘಕಾಲ ನಡೆದರೂ ಅಂತಿಮವಾಗಿ ‘ಡ್ರಾ’ ಆಯಿತು.
ಕೇವಲ ಒಂದು ಪಂದ್ಯ ಉಳಿದಿರುವಂತೆ ಸ್ಕೋರ್ 6.5–6.5 ರಲ್ಲಿ ಸಮಬಲವಾಗಿದೆ. ಸೆಂಟೋಸಾ ದ್ವೀಪದ ಐಷಾರಾಮಿ ರೆಸಾರ್ಟ್‌ನಲ್ಲಿ ಗುರುವಾರ ನಡೆಯುವ ಅಂತಿಮ ಪಂದ್ಯವೂ ಡ್ರಾ ಆದಲ್ಲಿ ಶುಕ್ರವಾರ ಅಲ್ಪ ಅವಧಿಯ ಟೈಬ್ರೇಕರ್ ಪಂದ್ಯಗಳನ್ನು ಆಡಿಸಲಾಗುವುದು. ಒಂದು ವೇಳೆ ನಿರ್ಣಾಯಕ ಫಲಿತಾಂಶ ಬಂದರೆ ಗೆದ್ದ ಆಟಗಾರ ಚಾಂಪಿಯನ್ ಆಗಲಿದ್ದಾರೆ.
14ನೇ ಪಂದ್ಯದಲ್ಲಿ 32 ವರ್ಷ ವಯಸ್ಸಿನ ಲಿರೆನ್ ಬಿಳಿ ಕಾಯಿಗಳಲ್ಲಿ ಆಡಲಿದ್ದು, ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಯತ್ನ ನಡೆಸಲಿದ್ದಾರೆ.
ಬಿಳಿ ಕಾಯಿಗಳಲ್ಲಿ ಆಡಿದ ಚಾಲೆಂಜರ್, 18 ವರ್ಷ ವಯಸ್ಸಿನ ಗುಕೇಶ್ ‘ಕಿಂಗ್ ಪಾನ್’ ಓಪನಿಂಗ್ ಅನುಸರಿಸಿದರೆ, ಲಿರೆನ್ ಫ್ರೆಂಚ್ ಡಿಫೆನ್ಸ್ ತಂತ್ರದ ಮೊರೆಹೋದರು. ಎಂದಿನಂತೆ ಲಿರೆನ್ ನಡೆಗಳಿಗೆ ಹೆಚ್ಚು ಸಮಯ ತೆಗೆದುಕೊಂಡರು. ಮಧ್ಯಮ ಹಂತದ ಆಟದಲ್ಲಿ ಕೆಲವು ‘ಎಕ್ಸ್‌ಚೇಂಜ್‌ಗಳು’ ನಡೆದವು. ಇಬ್ಬರೂ ಎರಡು ಪಾನ್‌ಗಳನ್ನು, ಒಂದೊಂದು ‘ನೈಟ್‘ (ಅಶ್ವ), ‘ಬಿಷಪ್’ (ರಥ) ಕಳೆದುಕೊಂಡರು. ಕಪ್ಪುಕಾಯಿಗಳಲ್ಲಿ ಆಡಿದ್ದ ಲಿರೆನ್ ಈ ಹಂತದಲ್ಲಿ ಸಹಜವಾಗಿ ರಕ್ಷಣೆಯ ಆಟಕ್ಕೆ ಆದ್ಯತೆ ಕೊಟ್ಟರು. ಚೆಸ್ ಎಂಜಿನ್ ಕೂಡ ‘ಸಮಬಲ’ದ ಆಟ ನಡೆದಿದೆ ಎಂದು ತೋರಿಸಿತು.
ಫೈನಲ್‌ನ 14 ಆಟಗಳಲ್ಲಿ ಕೊನೆಯ ಬಾರಿ ಬಿಳಿ ಕಾಯಿಗಳಲ್ಲಿ ಆಡಿದ ಗುಕೇಶ್ ಗೆಲುವಿಗೆ ಇನ್ನಿಲ್ಲದ ಯತ್ನ ನಡೆಸಿದರು. ಆದರೆ ಧೃತಿಗೆಡದ ಚೀನಾದ ಆಟಗಾರ ಅಪಾಯಕ್ಕೆ ಆಹ್ವಾನ ನೀಡದೇ ಕರಾರುವಾಕ್ ನಡೆಗಳನ್ನಿರಿಸಿದರು. ಅಂತಿಮವಾಗಿ ನಡೆಗಳ ಪುನರಾವರ್ತನೆಯಿಂದ (ತ್ರೀ ಫೋಲ್ಡ್ ರಿಪಿಟೇಶನ್) ಸುದೀರ್ಘ ಪಂದ್ಯ ಸಮಬಲದಲ್ಲೇ ಮುಗಿಯಿತು.
ಪಂದ್ಯ ಡ್ರಾ ಆದಾಗ ಇಬ್ಬರ ಬಳಿಯೂ ಒಂದೊಂದು ರೂಕ್ (ಗಜ), ಗುಕೇಶ್ ಬಳಿ ಮೂರು ಕಾಲಾಳುಗಳು, ಲಿರೆನ್ ಬಳಿ ಎರಡು ಕಾಲಾಳುಗಳು (ಪಾನ್ಸ್) ಉಳಿದಿದ್ದವು.
ಟೈಬ್ರೇಕ್ ಹೇಗಿರುತ್ತೆ...
ಒಂದೊಮ್ಮೆ ಉಭಯ ಆಟಗಾರರ ನಡುವಣ ಸ್ಕೋರ್ 7–7 ಸಮನಾದಲ್ಲಿ ಶುಕ್ರವಾರ ಟೈಬ್ರೇಕ್ ಪಂದ್ಯಗಳನ್ನು ಆಡಿಲಾಗುತ್ತದೆ. ಮೊದಲು ತಲಾ 15 ನಿಮಿಷಗಳ ನಾಲ್ಕು ರ್‍ಯಾಪಿಡ್ ಮಾದರಿಯ ಪಂದ್ಯಗಳನ್ನು ಆಡಲಾಗುವುದು. ಇದರ ನಂತರವೂ ಸ್ಕೋರ್ ಸಮನಾದಲ್ಲಿ 10 ನಿಮಿಷಗಳ ಎರಡು ಮಿನಿ ರ‍್ಯಾಪಿಡ್ ಪಂದ್ಯಗಳನ್ನು ಆಡಿಲಾಗುವುದು. ಅಲ್ಲೂ ಸಮನಾದಲ್ಲಿ ಎರಡು ಬ್ಲಿಟ್ಜ್ (ವೇಗದ ಆಟ) ಗೇಮ್ ಆಡಿಸಲಾಗುವುದು. ಮತ್ತೆ ನಿರ್ಣಾಯಕ ಫಲಿತಾಂಶ ಬರದಿದ್ದರೆ ‘ಸಡನ್‌ಡೆತ್ ಬ್ಲಿಟ್ಸ್’ (ಯಾರಾದರೊಬ್ಬರು ಗೆಲ್ಲುವವರೆಗೆ) ಆಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.