
ಗುವಾಹಟಿ: ಭಾರತದ ಶಟ್ಲರ್‌ಗಳು ಗುವಾಹಟಿ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂರನೇ ದಿನವಾದ ಗುರುವಾರವೂ ಪಾರಮ್ಯ ಮುಂದುವರಿಸಿದರು. ಶ್ರೇಯಾಂಕರಹಿತ ಆಟಗಾರ್ತಿ ತಾನ್ಯಾ ಹೇಮಂತ್ ಅವರು ಅಗ್ರ ಶ್ರೇಯಾಂಕದ ನೆಸ್ಲಿಹಾನ್ ಅರಿನ್ ಅವರಿಗೆ ಆಘಾತ ನೀಡಿ, ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ವಿಶ್ವ ಕ್ರಮಾಂಕದಲ್ಲಿ 72ನೇ ಸ್ಥಾನದಲ್ಲಿರುವ ತಾನ್ಯಾ 23-25, 22–20, 21–19 ರಿಂದ ಟರ್ಕಿಯ ಅರಿನ್ ಅವರನ್ನು ಹಿಮ್ಮೆಟ್ಟಿಸಿದರು. ಕರ್ನಾಟಕದ ತಾನ್ಯಾ ಮುಂದಿನ ಸುತ್ತಿನಲ್ಲಿ ಸ್ವದೇಶದ ತನ್ವಿ ಶರ್ಮಾ ಅವರನ್ನು ಎದುರಿಸಲಿದ್ದಾರೆ.
ಎಂಟನೇ ಶ್ರೇಯಾಂಕದ ತನ್ವಿ ಇನ್ನೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21-17, 23-21ರಲ್ಲಿ ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ಪಾಸಾಓರ್ನ್ ಫನ್ನಾಚೆಟ್ ಅವರನ್ನು ಸೋಲಿಸಿದರು.
ಭಾರತದ ಆಟಗಾರ್ತಿಯರ ವ್ಯವಹಾರವಾಗಿದ್ದ 16ರ ಸುತ್ತಿನ ಪಂದ್ಯಗಳಲ್ಲಿ 96ನೇ ಕ್ರಮಾಂಕದ ಅಸ್ಮಿತಾ ಚಾಲಿಹಾ 16-21, 21-17, 21-16 ರಿಂದ ಐದನೇ ಶ್ರೇಯಾಂಕದ ಅನ್ಮೋಲ್ ಖರ್ಬ್ ಅವರನ್ನು ಹಿಮ್ಮೆಟ್ಟಿಸಿದರೆ, ಇಶಾರಾಣಿ ಬರುವಾ 21-13, 10-21, 21-12ರಿಂದ ಶ್ರೇಯಾ ಲೆಲೆ ಅವರನ್ನು ಸೋಲಿಸಿದರು.
ಅನುಪಮಾ ಉಪಾಧ್ಯಾಯ 15-21, 15-21 ರಲ್ಲಿ ಇಂಡೊನೇಷ್ಯಾದ ಚಿಯಾರಾ ಮಾರ್ವೆಲ್ಲಾ ಹ್ಯಾಂಡೊಯೊ ಎದುರು ಸೋಲನುಭವಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ತರುಣ್ ಮನ್ನೆಪಲ್ಲಿ 21-13, 21-16ರಿಂದ ಸ್ವದೇಶದ ಮೆಯಿರಾಬಾ ಲುವಾಂಗ್ ಮೈಸನಮ್ ಅವರನ್ನು ಸೋಲಿಸಿ ಎಂಟರ ಘಟ್ಟ ಪ್ರವೇಶಿಸಿದರು. ಕನ್ನಡಿಗ ತುಷಾರ್ ಸುವೀರ್ 21-17, 18-21, 21-15ರಿಂದ ಇಂಡೊನೇಷ್ಯಾದ ಬಿಸ್ಮೊ ರಾಯಾ ಒಕ್ಟೋರಾ ವಿರುದ್ಧ ಜಯ ಸಾಧಿಸಿದರು.
ಆದರೆ, ಭಾರತದ ಆರ್ಯಮನ್ ಟಂಡನ್ 21-15, 16-21, 13-21ರಿಂದ ಇಂಡೊನೇಷ್ಯಾದ ಡೆಂಡಿ ಟ್ರಿಯಾನ್ಸ್ಯಾ ವಿರುದ್ಧ ಸೋತರು. ಭಾರತದ ಮತ್ತೊಬ್ಬ ಸ್ಪರ್ಧಿ ಗಿನ್ಪಾಲ್ ಸೊನ್ನಾ 16-21, 15-21ರಿಂದ ಎರಡನೇ ಶ್ರೇಯಾಂಕದ ಯುದೈ ಒಕಿಮೊಟೊ (ಜಪಾನ್) ಅವರಿಗೆ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.