ADVERTISEMENT

PV Web Exclusive: ಕೊರೊನಾ ದಾಳಿಗೆ ಬಳಲಿದ ‘ಜಿಮ್‌ ಸೆಂಟರ್‌’

ಸಿದ್ದು ಆರ್.ಜಿ.ಹಳ್ಳಿ
Published 15 ಅಕ್ಟೋಬರ್ 2020, 9:54 IST
Last Updated 15 ಅಕ್ಟೋಬರ್ 2020, 9:54 IST
ಹಾವೇರಿಯ ಕಿಂಗ್‌ ಫಿಟ್‌ನೆಸ್‌ ಸೆಂಟರ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿರುವ ಫಿಟ್‌ನೆಸ್‌ ಪ್ರಿಯರು 
ಹಾವೇರಿಯ ಕಿಂಗ್‌ ಫಿಟ್‌ನೆಸ್‌ ಸೆಂಟರ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿರುವ ಫಿಟ್‌ನೆಸ್‌ ಪ್ರಿಯರು    

ಹಾವೇರಿ: ಬಲಾಢ್ಯತೆಯ ಪ್ರತೀಕವಾಗಿದ್ದ ‘ಜಿಮ್‌ ಸೆಂಟರ್‌‌’ಗಳು ಕೊರೊನಾ ದಾಳಿಗೆ ಅಕ್ಷರಶಃ ಬಳಲಿ ಬೆಂಡಾಗಿವೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಮಾಲೀಕರು ಹರಸಾಹಸ ಪಡುತ್ತಿದ್ದಾರೆ.

ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮಾರ್ಚ್‌ 22ರಿಂದ ಲಾಕ್‌ಡೌನ್‌ ಜಾರಿಗೊಳಿಸಿತು. ಇದರಿಂದ ಜಿಮ್‌ ಚಟುವಟಿಕೆಗಳು ಆಗಸ್ಟ್‌ 4ರವರೆಗೆ ಅಂದರೆ, ಬರೋಬ್ಬರಿ ನಾಲ್ಕು ತಿಂಗಳು ಸ್ಥಗಿತಗೊಂಡಿದ್ದವು. ಅನ್‌ಲಾಕ್‌ 3.0 ಮಾರ್ಗಸೂಚಿ ಪ್ರಕಾರ ಜಿಮ್‌ ಮತ್ತು ಯೋಗ ಕೇಂದ್ರಗಳನ್ನು ಆಗಸ್ಟ್‌ 5ರಿಂದ ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಹೀಗಾಗಿ, ಹಾವೇರಿ ನಗರದಲ್ಲಿ ಪುನರಾರಂಭಗೊಂಡಿರುವ 7 ಜಿಮ್‌ ಸೆಂಟರ್‌ಗಳಲ್ಲಿ ‘ಫಿಟ್‌ನೆಸ್‌’ ತಾಲೀಮು ಶುರುವಾಗಿದ್ದರೂ, ಮೊದಲಿನಷ್ಟು ಅಬ್ಬರ ಕಂಡುಬರುತ್ತಿಲ್ಲ. ಶೇ 50ರಷ್ಟು ಸದಸ್ಯರು ಜಿಮ್‌ ಸೆಂಟರ್‌ಗಳತ್ತ ತಿರುಗಿ ನೋಡುತ್ತಿಲ್ಲ. ಹೀಗಾಗಿ, ಆದಾಯಕ್ಕೂ ಹೊಡೆತ ಬಿದ್ದಿದೆ.

ADVERTISEMENT

ಸಾಲದ ಭಾರ:

‘2019ರ ಜೂನ್‌ನಲ್ಲಿ₹15 ಲಕ್ಷ ವೆಚ್ಚದ ಜಿಮ್‌ ಉಪಕರಣಗಳನ್ನು ತರಿಸಿ,‘ಕಿಂಗ್‌ ಫಿಟ್‌ನೆಸ್‌ ಸೆಂಟರ್‌’ ಅನ್ನು ಹಾವೇರಿಯ ಬಸವೇಶ್ವರ ನಗರದಲ್ಲಿ ಆರಂಭ ಮಾಡಿದೆ. ಆರಂಭವಾದ ಹತ್ತೇ ತಿಂಗಳಿಗೆ ಕೊರೊನಾ ವಕ್ಕರಿಸಿತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ 4 ತಿಂಗಳು ಸೆಂಟರ್‌ ಅನ್ನು ಬಂದ್‌ ಮಾಡಿದ ಕಾರಣ ಆದಾಯ ಶೂನ್ಯವಾಯಿತು. ವಾಣಿಜ್ಯ ಕಟ್ಟಡದ ವಿದ್ಯುತ್‌ ಬಿಲ್‌ ಪ್ರತಿ ತಿಂಗಳು ಮಿನಿಮಮ್‌ ಚಾರ್ಜ್‌ 2,500 ಕಟ್ಟಲೇ ಬೇಕಿತ್ತು. ಬ್ಯಾಂಕಿನಿಂದ ಪಡೆದಿದ್ದ ಸಾಲ ಕಟ್ಟಲು ಪರದಾಡುವಂತಾಯಿತು. ‘ಜಿಮ್‌ ಸೆಂಟರ್‌’ ಸ್ವಂತ ಕಟ್ಟಡವಾದ ಕಾರಣ ಬಾಡಿಗೆ ಭಾರದಿಂದ ಬಚಾವಾದೆ’ ಎನ್ನುತ್ತಾರೆ ಮಾಲೀಕ ಅಮೃತ್‌ ಅವಘನ.

ಬಾಡಿಗೆ ಹೊರೆ:

‘ಹಾವೇರಿ ನಗರದಲ್ಲಿ 7 ವರ್ಷಗಳಿಂದ ಜಿಮ್‌ ಸೆಂಟರ್‌ ನಡೆಸುತ್ತಿದ್ದೇನೆ. 2019ರ ಡಿಸೆಂಬರ್‌ನಲ್ಲಿ ₹10 ಲಕ್ಷ ವೆಚ್ಚದಲ್ಲಿ ರಿನೋವೇಷನ್ ಮಾಡಿಸಿದೆ.‌ ದುರದೃಷ್ಟವಶಾತ್‌, ಮಾರ್ಚ್‌ ತಿಂಗಳಲ್ಲಿ ಕೊರೊನಾ ವೈರಸ್ ದಾಳಿ ಇಟ್ಟಿತು. ಜಿಮ್‌ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತು. ಏಪ್ರಿಲ್‌ನಿಂದ ಜುಲೈವರೆಗೆ ಪ್ರತಿ ತಿಂಗಳು 8 ಸಾವಿರ ಬಾಡಿಗೆ ಕಟ್ಟಲು ಪರದಾಡುವಂತಾಯಿತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಿಮ್‌ ಸೆಂಟರ್‌ಗಳಿಗೆ ಸರ್ಕಾರ ಪರಿಹಾರ ನೀಡಿ, ಪ್ರೋತ್ಸಾಹಿಸಬೇಕು’ ಎನ್ನುತ್ತಾರೆ ಹಾವೇರಿಯ ವಿದ್ಯಾನಗರದ ‘ರಾಕ್‌ ಮಲ್ಟಿ ಜಿಮ್‌’ ಮಾಲೀಕ ರಾಕೇಶ ಎಂ.ಶಂಕರಿಕೊಪ್ಪ.

ಫಿಟ್‌ನೆಸ್ ಮೋಹ:

ಈ ‘ಫಿಟ್‌ನೆಸ್‌’ ಮೋಹ ಈಗ ಕೆಲವರಿಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳಿಂದ ಮುದುಕರವರೆಗೂ ಜ್ವರದಂತೆ ಕಾಡುತ್ತಿದೆ. ಇದು ಆರೋಗ್ಯದ ಕಾಳಜಿಯೋ? ದೇಹದ ಮೇಲಿನ ವ್ಯಾಮೋಹವೋ? ಅಂತ ಯುವಜನರನ್ನು ಕೇಳಿದರೆ, ಎರಡೂ ಹೌದು ಎನ್ನುತ್ತಾರೆ.

ಅಂಡೆಯಂತಿರುವ ಹೊಟ್ಟೆ ಕರಗಿಸಬೇಕು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಿಸಬೇಕು, ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪದಕ ಗಿಟ್ಟಿಸಬೇಕು, ಅಂಚಿಕಡ್ಡಿಯಂತಿರುವ ನಾನು ‘ಫಿಟ್‌ ಅಂಡ್‌ ಫೈನ್‌’ ಆಗಿ ಕಾಣಿಸಬೇಕು... ಹೀಗೆ ಹಲವಾರು ಕನಸು, ಕನವರಿಕೆಗಳನ್ನಿಟ್ಟುಕೊಂಡು, ವಿವಿಧ ವಯೋಮಾನದ ಜನರು ಜಿಮ್‌ಗಳಿಗೆ ಧಾವಿಸುತ್ತಾರೆ.

ಸುರಕ್ಷತೆಗೆ ಆದ್ಯತೆ:

‘ಜಿಮ್‌ ಸೆಂಟರ್‌ಗಳಿಗೆ ಬರುವ ತಮ್ಮ ಸದಸ್ಯರ ಆರೋಗ್ಯ ಕಾಳಜಿಯಿಂದ, ಕೇಂದ್ರಗಳನ್ನು ವಾರಕ್ಕೊಮ್ಮೆ ಸ್ಯಾನಿಟೈಸ್ ಮಾಡುವುದು, ಸದಸ್ಯರಿಗೆ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುವುದು. ಮನೆಯಿಂದಲೇ ಕುಡಿಯುವ ನೀರು ತರುವಂತೆ ತಿಳಿ ಹೇಳುವುದು, ಆಗಾಗ್ಗೆ ಕೈಗಳನ್ನು ಸ್ಯಾನಿಟೈಸ್‌ನಿಂದ ಶುಚಿ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದೇವೆ. ಕೋವಿಡ್‌ ಮಾರ್ಗಸೂಚಿ ಪ್ರಕಾರ ಜಿಮ್‌ ಸೆಂಟರ್ ನಡೆಸುತ್ತಿದ್ದೇವೆ. ಆದರೂ ಕೆಲವು ಸದಸ್ಯರು ಸೋಂಕಿನ ಭಯದಿಂದ ವರ್ಕ್‌ಔಟ್‌ ಮಾಡಲು ಹಿಂಜರಿಯುತ್ತಿದ್ದಾರೆ’ ಎನ್ನುತ್ತಾರೆ ಹಾವೇರಿಯ ‘ಆರೆಂಜ್‌ ಜಿಮ್‌ ಸೆಂಟರ್’‌ ಮಾಲೀಕ ವಿಶ್ವ ಕಲಾಲ್‌.

‘ಮನೆಯಲ್ಲಿ ಇದ್ದೂ ಇದ್ದು, ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿ ಹೋಗಿದ್ದೆವು. ಈಗ 2 ತಿಂಗಳಿಂದ ವರ್ಕ್‌ಔಟ್‌ ಮಾಡುತ್ತಿರುವುದರಿಂದ ದೇಹ ಮತ್ತು ಮನಸ್ಸು ಸದೃಢವಾಗುತ್ತಿದೆ. ಕೊರೊನಾ ವೈರಸ್‌ ಅನ್ನು ಹಿಮ್ಮೆಟ್ಟಿಸುವಷ್ಟು ರೋಗ ನಿರೋಧಕ ಶಕ್ತಿ ದೇಹದಲ್ಲಿ ಉತ್ಪತ್ತಿಯಾಗಿದೆ. ಸುರಕ್ಷತಾ ಕ್ರಮ ಅನುಸರಿಸುವ ಮೂಲಕ ದೈಹಿಕ ಕಸರತ್ತು ಮಾಡುತ್ತಿದ್ದೇವೆ’ ಎನ್ನುತ್ತಾರೆ ಫಿಟ್‌ನೆಸ್‌ ಪ್ರಿಯರಾದ ಗುರುರಾಜ ಎನ್‌.ಹಾವೇರಿ ಮತ್ತು ಆದಿತ್ಯ ಜೆ.ಇಟಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.