ADVERTISEMENT

ಈ ವರ್ಷವೇ ಒಲಿಂಪಿಕ್ಸ್‌ ನಡೆಯುವ ಭರವಸೆ

ರಾಯಿಟರ್ಸ್
Published 7 ಜೂನ್ 2021, 15:40 IST
Last Updated 7 ಜೂನ್ 2021, 15:40 IST
ಸೋಮವಾರ ಜಪಾನ್ ತಲುಪಿದ ಆಸ್ಟ್ರೇಲಿಯಾದ ಒಲಿಂಪಿಕ್‌ ಸಾಫ್ಟ್‌ಬಾಲ್ ತಂಡ ಒಟಾ ನಗರದ ಮೇಯರ್ ಅವರ ಸಲಹೆಗಳನ್ನು ಆಲಿಸಿದರು –ರಾಯಿಟರ್ಸ್ ಚಿತ್ರ
ಸೋಮವಾರ ಜಪಾನ್ ತಲುಪಿದ ಆಸ್ಟ್ರೇಲಿಯಾದ ಒಲಿಂಪಿಕ್‌ ಸಾಫ್ಟ್‌ಬಾಲ್ ತಂಡ ಒಟಾ ನಗರದ ಮೇಯರ್ ಅವರ ಸಲಹೆಗಳನ್ನು ಆಲಿಸಿದರು –ರಾಯಿಟರ್ಸ್ ಚಿತ್ರ   

ಟೋಕಿಯೊ: ಜಪಾನ್‌ ಜನಸಂಖ್ಯೆಯ ಅರ್ಧದಷ್ಟು ಮಂದಿ ಒಲಿಂಪಿಕ್ಸ್ ಕೂಟ ಈ ವರ್ಷವೇ ನಡೆಯಲಿದೆ ಎಂಬ ಭರವಸೆಯಲ್ಲಿದ್ದಾರೆ ಎಂದು ಯೊಮಿಯುರಿ ಪತ್ರಿಕೆ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಕಳೆದ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ ಕೂಟವನ್ನು ಈ ವರ್ಷಕ್ಕೆ ಮುಂದೂಡಲಾಗಿತ್ತು. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಟೋಕಿಯೊದಲ್ಲಿ ಕೂಟವನ್ನು ಸುರಕ್ಷಿತವಾಗಿ ಆಯೋಜಿಸುವ ಬಗ್ಗೆ ಇನ್ನೂ ಸಂದೇಹಗಳು ಉಳಿದಿವೆ. ಭಾರಿ ವಿರೋಧದ ನಡುವೆಯೂ ಕೂಟವನ್ನು ಆಯೋಜಿಸಿಯೇ ತೀರುವುದಾಗಿ ಆಯೋಜಕರು ಪಟ್ಟು ಹಿಡಿದಿದ್ದಾರೆ.

ಈ ನಡುವೆ, ಜೂನ್ ನಾಲ್ಕರಿಂದ ಆರರ ವರೆಗೆ ನಡೆಸಿದ ಸಮೀಕ್ಷೆಯಲ್ಲಿ 50 ಶೇಕಡಾ ಮಂದಿ ಒಲಿಂಪಿಕ್ಸ್ ನಡೆಯುವುದು ಖಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರೇಕ್ಷಕರಿಲ್ಲದೆ ಕೂಟ ನಡೆಯಲಿದೆ ಎಂದು 26 ಶೇಕಡಾ ಮಂದಿ ಹೇಳಿದ್ದರೆ ಉಳಿದವರು ಕೂಟ ರದ್ದಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಅಧಿಕಾರಿ ಆತ್ಮಹತ್ಯೆ

ಜಪಾನ್ ಒಲಿಂಪಿಕ್ ಸಮಿತಿಯ (ಜೆಒಸಿ) ಹಿರಿಯ ಅಧಿಕಾರಿಯೊಬ್ಬರು ಟೋಕಿಯೊದ ಸಬ್‌ವೇದಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸಾವಿಗೀಡಾದ ವ್ಯಕ್ತಿ ಜೆಒಸಿಯ ಹಣಕಾಸು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಟಿವಿ ಚಾನಲ್ ನಿಪೋನ್‌ ಹೇಳಿದೆ.

ಪ್ರಕರಣದ ಕುರಿತು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಲಿಂಪಿಕ್ಸ್‌ ಆಯೋಜನೆಗೆ ಸಂಬಧಿಸಿದ ಗೊಂದಲದ ನಡುವೆಯೇ ಈ ಘಟನೆ ನಡೆದಿರುವುದು ಅನೇಕ ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.