
ಪಣಜಿ: ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಅವರು ವಿಶ್ವಕಪ್ ಚೆಸ್ ಟೂರ್ನಿಯ ಐದನೇ ಸುತ್ತಿನ ಮೊದಲ ಕ್ಲಾಸಿಕಲ್ ಆಟದಲ್ಲಿ ಪ್ರಬಲ ಆಟಗಾರ ಲೆವೋನ್ ಅರೋನಿಯನ್ ಜೊತೆ ಡ್ರಾ ಮಾಡಿಕೊಂಡರು. ಕಣದಲ್ಲಿ ಉಳಿದಿರುವ ಭಾರತದ ಇನ್ನೊಬ್ಬ ಆಟಗಾರ ಪೆಂಟಾಲ ಹರಿಕೃಷ್ಣ ಅವರೂ ಮೆಕ್ಸಿಕೊದ ಜೋಸ್ ಎಡ್ವರ್ಡೊ ಮಾರ್ಟಿನೆಝ್ ಜೊತೆ ಪಾಯಿಂಟ್ ಹಂಚಿಕೊಂಡರು.
ನಿರೀಕ್ಷೆ ಮೀರಿ ಐದನೇ ಸುತ್ತು ತಲುಪಿರುವ ಹರಿಕೃಷ್ಣ ಅವರು ಬಿಳಿ ಕಾಯಿಗಳಲ್ಲಿ ಆಡಿದ ಜೋಸ್ ಮಾರ್ಟಿನೆಝ್ ಎದುರು ಎಚ್ಚರಿಕೆಯ ಆಟಕ್ಕೆ ಆದ್ಯತೆ ನೀಡಿದರು. ಮೆಕ್ಸಿಕೊದ 26 ವರ್ಷ ವಯಸ್ಸಿನ ಆಟಗಾರ ಆಟಗಾರ ಈ ಟೂರ್ನಿಯಲ್ಲಿ ಈ ಮೊದಲು ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್, ಸರ್ಬಿಯಾದ ಅಲೆಕ್ಸಿ ಸರನ ಅವರನ್ನು ಸೋಲಿಸಿದ್ದರು. ಆದರೆ ಈ ಟೂರ್ನಿಯಲ್ಲಿ ಅಷ್ಟೇ ಉತ್ತಮವಾಗಿ ಆಡುತ್ತಿರುವ 39 ವರ್ಷ ವಯಸ್ಸಿನ ಹರಿಕೃಷ್ಣ ಅವರಿಗೆ ಡ್ರಾ ಮಾಡುವುದು ಕಷ್ಟವಾಗಲಿಲ್ಲ. ಪಂದ್ಯ 41 ನಡೆಗಳನ್ನು ಕಂಡಿತು.
ಇರಿಗೇಶಿ ಅವರು ಎರಡು ಬಾರಿಯ ವಿಶ್ವಕಪ್ ವಿಜೇತ, ಅಮೆರಿಕದ ಅರೋನಿಯನ್ ಅವರ ಮೇಲೆ ಒತ್ತಡ ಹೇರಲು ಸಾಕಷ್ಟು ಪ್ರಯತ್ನ ಹಾಕಿದರು. ಆದರೆ ಅರ್ಮೇನಿಯಾ ಮೂಲದ ಅಮೆರಿಕದ ಆಟಗಾರ ಅಷ್ಟೇ ಜಾಗರೂಕತೆಯಿಂದ ಆಡಿದರು. ರೂಕ್–ಪಾನ್ ಎಂಡ್‌ಗೇಮ್‌ನಲ್ಲಿ ಅರ್ಜುನ್ ಬಳಿ ಒಂದು ಕಾಲಾಳು ಹೆಚ್ಚುವರಿಯಿದ್ದರೂ ಅದು ಉಪಯೋಗಕ್ಕೆ ಬರುವಂತಿರಲಿಲ್ಲ.
206 ಆಟಗಾರರಿದ್ದ ಈ ಟೂರ್ನಿಯಲ್ಲಿ ಈಗ 16 ಆಟಗಾರರು ಉಳಿದಿದ್ದು, ಅವರು ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಎಂಟು ಪಂದ್ಯಗಳಲ್ಲಿ ಒಂದರಲ್ಲಷ್ಟೇ ಸೋಲು–ಗೆಲುವು ನಿರ್ಧಾರವಾಯಿತು. ಉಜ್ಬೇಕ್ ಆಟಗಾರ ಜಾವೊಖಿರ್ ಸಿಂಧರೋವ್ ಅವರು ಜರ್ಮನಿಯ ಫೆಡರಿಕ್ ಅವರನ್ನು ಸೋಲಿಸಿದರು.
ರಷ್ಯಾದ ಆಂಡ್ರಿ ಎಸಿಪೆಂಕೊ– ಅಲೆಕ್ಸಿ ಗ್ರೆಬ್ನೆವ್ ನಡುವಣ, ಜರ್ಮನಿಯ ಅಲೆಕ್ಸಾಂಡರ್ ಡೊನ್ಚೆಂಕೊ ಮತ್ತು ವಿಯೆಟ್ನಾಇನ ಲೀಮ್ ಲೆ ಕ್ವಾಂಗ್ ನಡುವಣ, ಅರ್ಮೇನಿಯಾದ ಗೇಬ್ರಿಯಲ್ ಸೆರ್ಗೆಸಿಯಾನ್– ಉಜ್ಬೇಕಿಸ್ತಾನದ ನದಿರ್ಬೆಕ್ ಯಾಕುಬೊಯೆವ್ ನಡುವಣ ಆಟಗಳೂ ಡ್ರಾ ಆದವು.
ಸ್ಯಾಮ್ ಶಂಕ್ಲಾಂಡ್ ಮತ್ತು ಡೇನಿಯಲ್ ದುಬೋವ್ ಸಹ ಆಟವನ್ನು ಡ್ರಾ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.