
ಪಣಜಿ: ಭಾರತದ ಅನುಭವಿ ಗ್ರ್ಯಾಂಡ್‌ಮಾಸ್ಟರ್ ಪೆಂಟಾಲ ಹರಿಕೃಷ್ಣ ಅವರು ಐದನೇ ಸುತ್ತಿನ ಟೈಬ್ರೇಕರಿನಲ್ಲಿ ಮೆಕ್ಸಿಕೊದ ಹೊಸೆ ಎಡ್ವರ್ಡೊ ಮಾರ್ಟಿನೆಝ್ ಅಲ್ಕಂತಾರ ಅವರಿಗೆ ಮಣಿದರು. ಇದರೊಂದಿಗೆ ವಿಶ್ವಕಪ್ ಚೆಸ್ ಟೂರ್ನಿಯಲ್ಲಿ ಎರಡನೆ ಶ್ರೇಯಾಂಕದ ಅರ್ಜುನ್ ಇರಿಗೇಶಿ ಅವರು ಭಾರತದ ಏಕೈಕ ಭರವಸೆಯಾಗಿ ಉಳಿದಿದ್ದಾರೆ.
ಪೆರು ಸಂಜಾತ ಮೆಕ್ಸಿಕೊದ 26 ವರ್ಷ ವಯಸ್ಸಿನ ಮಾರ್ಟಿನೆಝ್ ಅಲ್ಕಂತಾರ ಅವರು ಭಾನುವಾರ ನಡೆದ ಟೈಬ್ರೇಕರಿನಲ್ಲಿ 39 ವರ್ಷ ವಯಸ್ಸಿನ ಹರಿಕೃಷ್ಣ ಅವರನ್ನು 3.5– 2.5 ರಿಂದ ಸೋಲಿಸಿ ಎಂಟರ ಘಟ್ಟ ತಲುಪಿದರು.
ಇವರಿಬ್ಬರ ನಡುವಣ ಕ್ಲಾಸಿಕಲ್ ಸುತ್ತು 1–1 ಸಮಬಲ ಆಗಿತ್ತು. ಮೊದಲ ಸೆಟ್ ಟೈಬ್ರೇಕರ್‌ನ ಎರಡೂ ಆಟಗಳು ಡ್ರಾ ಆದವು. ಎರಡನೇ ಸೆಟ್‌ನ ಮೊದಲ ಆಟದಲ್ಲಿ ಅಲ್ಕಂತಾರ ಜಯಗಳಿಸಿದರಲ್ಲದೇ, ಮರು ಆಟ ಡ್ರಾ ಮಾಡಿಕೊಂಡು ಆತಿಥೇಯ ಆಟಗಾರನ ಸವಾಲು ಕೊನೆಗೊಳಿಸಿದರು.
ಅರ್ಜುನ್ ಇರಿಗೇಶಿ ಶನಿವಾರ ಮುಗಿದ ಕ್ಲಾಸಿಕಲ್ ಸುತ್ತಿನಲ್ಲೇ ಅಮೆರಿಕದ ಲೆವೋನ್ ಅರೋನಿಯನ್ ಅವರನ್ನು 1.5–0.5 ರಿಂದ ಸೋಲಿಸಿದ್ದರು.
ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಮೆರಿಕದ ಸ್ಯಾಮ್ ಶಂಕ್ಲಾಂಡ್ 3–1 ರಿಂದ ರಷ್ಯಾದ ಡೇನಿಯಲ್ ದುಬೋವ್ ಅವರನ್ನು ಸೋಲಿಸಿದರು. ಶಂಕ್ಲಾಂಡ್ ಟೈಬ್ರೇಕರಿನ ಎರಡೂ ಆಟಗಳನ್ನು ಗೆದ್ದರು.
ತೀವ್ರ ಹೋರಾಟ ಕಂಡ ಇನ್ನೊಂದು ಮುಖಾಮುಖಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಡೊನ್ಚೆಂಕೊ ಅವರು 4.5–3.5 ರಿಂದ ವಿಯೆಟ್ನಾಮಿನ ಲೆ ಕ್ವಾಂಗ್ ಲೀಮ್ ಅವರನ್ನು ಸೋಲಿಸಿದರು. ಮೊದಲೆರಡು ಸೆಟ್‌ನ ಟೈಬ್ರೇಕರ್‌ಗಳಲ್ಲಿ ಉಭಯ ಆಟಗಾರರು ತಲಾ ಒಂದೊಂದು ಪಂದ್ಯ ಜಯಿಸಿದ್ದರು. ಮೂರನೇ ಸೆಟ್‌ನ ಮೊದಲ ಆಟ ಡ್ರಾ ಆಗಿ, ಎರಡನೆಯದರಲ್ಲಿ ಡೊನ್ಚೆಂಕೊ ಗೆದ್ದು ನಿಟ್ಟುಸಿರುಬಿಟ್ಟರು.
ರಷ್ಯಾ ಆಟಗಾರರ ವ್ಯವಹಾರವಾಗಿದ್ದ, 16ರ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಆಂಡ್ರಿ ಇಸಿಪೆಂಕೊ, ಅಲೆಕ್ಸಿ ಗ್ರೆಬ್ನೆವ್ ಅವರನ್ನು ಸೋಲಿಸಿದರು. ರಷ್ಯನ್ ಆಟಗಾರರು, ಈ ಟೂರ್ನಿಯಲ್ಲಿ ಫಿಡೆ ಧ್ವಜದಡಿ ಆಡುತ್ತಿದ್ದಾರೆ.
ಕ್ವಾರ್ಟರ್‌ಫೈನಲ್ ಮುಖಾಮುಖಿ
ಜಾವೊಖಿರ್ ಸಿಂಧರೋವ್ (ಉಜ್ಬೇಕಿಸ್ತಾನ)– ಹೊಸೆ ಎಡ್ವರ್ಡೊ ಅಲ್ಕಂತಾರ (ಮೆಕ್ಸಿಕೊ); ವೀ ಯಿ (ಚೀನಾ)– ಅರ್ಜುನ್ ಇರಿಗೇಶಿ (ಭಾರತ); ಸ್ಯಾಮ್ ಶಂಕ್ಲ್ಯಾಂಡ್ (ಅಮೆರಿಕ)– ಆ್ಯಂಡ್ರಿ ಇಸಿಪೆಂಕೊ (ಫಿಡೆ); ನದಿರ್ಬೆಕ್ ಯಾಕುಬುಯೆವ್ (ಉಜ್ಬೇಕಿಸ್ತಾನ)– ಅಲೆಕ್ಸಾಂಡರ್ ಡೊನ್ಚೆಂಕೊ (ಜರ್ಮನಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.