ADVERTISEMENT

ಚೆಸ್‌ ಒಲಿಂಪಿಯಾಡ್‌ನಲ್ಲಿ ಆನಂದ್‌ ಅನುಪಸ್ಥಿತಿ ಕಾಡಲಿದೆ: ಹರಿಕೃಷ್ಣ

ಪಿಟಿಐ
Published 26 ಜುಲೈ 2022, 15:28 IST
Last Updated 26 ಜುಲೈ 2022, 15:28 IST
ಪಿ.ಹರಿಕೃಷ್ಣ
ಪಿ.ಹರಿಕೃಷ್ಣ   

ನವದೆಹಲಿ: ‘ಈ ಬಾರಿಯ ಚೆಸ್‌ ಒಲಿಂಪಿಯಾಡ್‌ನಲ್ಲಿ ವಿಶ್ವನಾಥನ್‌ ಆನಂದ್‌ ಅವರ ಅನುಪಸ್ಥಿತಿ ಭಾರತ ತಂಡವನ್ನು ಕಾಡಲಿದೆ. ಆದರೆ ನಮ್ಮ ಯುವ ಆಟಗಾರರು ಶ್ರೇಷ್ಠ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ’ ಎಂದು ಭಾರತದ ಅಗ್ರಮಾನ್ಯ ಚೆಸ್‌ ಆಟಗಾರರಲ್ಲಿ ಒಬ್ಬರಾದ ಪಿ.ಹರಿಕೃಷ್ಣ ಹೇಳಿದ್ದಾರೆ.

44ನೇ ಚೆಸ್‌ ಒಲಿಂಪಿಯಾಡ್‌ ಚೆನ್ನೈನಲ್ಲಿ ಜುಲೈ 28 ರಿಂದ ಆಗಸ್ಟ್‌ 10ರ ವರೆಗೆ ನಡೆಯಲಿದೆ. ಐದು ಬಾರಿಯ ವಿಶ್ವಚಾಂಪಿಯನ್‌ ಆನಂದ್‌, ಈ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಅವರು ಭಾರತದ ತಂಡಗಳಿಗೆ ಮಾರ್ಗದರ್ಶಕರಾಗಿದ್ದಾರೆ.

‘ಈ ಬಾರಿ ಭಾರತವು ಅತ್ಯುತ್ತಮ ತಂಡವನ್ನು ಕಣಕ್ಕಿಳಿಸಿದೆ. ಆದರೆ ಆನಂದ್‌ ಇಲ್ಲದಿರುವುದು, ಭಾರಿ ವ್ಯತ್ಯಾಸಕ್ಕೆ ಕಾರಣವಾಗಬಹುದು. ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ನಮ್ಮ ತಂಡಗಳು ಸವಾಲಿಗೆ ಸಿದ್ದವಾಗಿವೆ’ ಎಂದು ತಿಳಿಸಿದರು.

ADVERTISEMENT

36 ವರ್ಷದ ಹರಿಕೃಷ್ಣ ಅವರು ಭಾರತ ‘ಎ’ ತಂಡದಲ್ಲಿ ಆಡಲಿದ್ದಾರೆ. ಕಳೆದ ತಿಂಗಳು ನಡೆದ ಪ್ರೇಗ್‌ ಚೆಸ್‌ ಮಾಸ್ಟರ್ಸ್‌ನಲ್ಲಿ ಪ್ರಶಸ್ತಿ ಗೆದ್ದಿರುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

‘ಪ್ರೇಗ್‌ ಮಾಸ್ಟರ್ಸ್‌ ಟೂರ್ನಿಯ ಗೆಲುವು ಸೂಕ್ತ ಸಮಯದಲ್ಲೇ ಬಂದಿದೆ. ಅಲ್ಲಿ ನೀಡಿದ್ದ ಉತ್ತಮ ಪ್ರದರ್ಶನವನ್ನು ಮುಂದುವರಿಸಿ, ಭಾರತ ತಂಡದ ಯಶಸ್ಸಿಗೆ ಕೊಡುಗೆ ನೀಡುವುದು ನನ್ನ ಗುರಿ’ ಎಂದಿದ್ದಾರೆ.

ನಾಳೆ ಚಾಲನೆ: ಭಾರತದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ಚೆಸ್‌ ಒಲಿಂಪಿಯಾಡ್‌ಗೆ ಚೆನ್ನೈನಲ್ಲಿ ಗುರುವಾರ ಚಾಲನೆ ಲಭಿಸಲಿದೆ.

ಈ ಸಲ ಅತಿಹೆಚ್ಚ ತಂಡಗಳು ಪಾಲ್ಗೊಳ್ಳುತ್ತಿದ್ದು, ಮುಕ್ತ ವಿಭಾಗದಲ್ಲಿ 188 ಮತ್ತು ಮಹಿಳೆಯರ ವಿಭಾಗದಲ್ಲಿ 162 ತಂಡಗಳು ಕಣದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.