
ನವದೆಹಲಿ: ಭಾರತದ ದೂರ ಅಂತರದ ಓಟಗಾರ ಹರ್ಮನ್‌ಜ್ಯೋತ್ ಸಿಂಗ್ ಅವರು ಜಪಾನ್ ದೇಶದ ಫುಕುವೋಕಾದಲ್ಲಿ ಶನಿವಾರ ನಡೆದ ಏಷ್ಯನ್ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್ ಪುರುಷರ 10 ಕಿ.ಮೀ. ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.
30 ವರ್ಷದ ಹರ್ಮನ್‌ಜೋತ್ ಅವರು 29 ನಿಮಿಷ 21 ಸೆಕೆಂಡುಗಳಲ್ಲಿ ಗುರಿ ತಲುಪಿ, ಕೂದಲೆಳೆಯ ಅಂತರದಲ್ಲಿ ಚಿನ್ನ ತಪ್ಪಿಸಿಕೊಂಡರು. ಆತಿಥೇಯ ಜಪಾನಿನ ರ್ಯುಜಿ ಮಿಯುರಾ (29ನಿ.20ಸೆ.) ಪ್ರಶಸ್ತಿ ಗೆದ್ದರು.
ಹರ್ಮನ್‌ಜ್ಯೋತ್ ಈ ಸ್ಪರ್ಧೆಯಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ ಓಟವನ್ನು ಮುಗಿಸಿದರು. 2024ರಲ್ಲಿ ಬೆಂಗಳೂರಿನಲ್ಲಿ ದಾಖಲಿಸಿದ್ದ (29:57) ವೈಯಕ್ತಿಕ ಸಾಧನೆಯನ್ನು ಸುಧಾರಿಸಿಕೊಂಡರು. ಸೀನಿಯರ್ ಮಹಿಳೆಯರ 10 ಕಿ.ಮೀ. ಓಟದಲ್ಲಿ ಭಾರತದ ಸೋನಿಯಾ 35 ನಿಮಿಷ 24 ಸೆಕೆಂಡುಗಳಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದರು.
ತಂಡ ವಿಭಾಗದ ಸ್ಪರ್ಧೆಗಳಲ್ಲಿ ಭಾರತ ಮೂರು ಕಂಚಿನ ಪದಕಗಳನ್ನು ಗೆದ್ದಿತು. 20 ವರ್ಷದೊಳಗಿನ ಮಹಿಳಾ ತಂಡ ಚಾಂಪಿಯನ್‌ಷಿಪ್‌ನಲ್ಲಿ (6 ಕಿ.ಮೀ.) ಭಾರತ ತಂಡವು 22 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು. ಜಪಾನ್ (9) ಮತ್ತು ಚೀನಾ (20) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದವು. ಭಾರತದ ಪುರುಷರ ತಂಡವು 25 ಅಂಕಗಳೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಜಪಾನ್ ಚಿನ್ನ (6) ಗೆದ್ದರೆ, ಚೀನಾ (19) ಬೆಳ್ಳಿ ಪದಕ ಗೆದ್ದಿತು.
ಮಹಿಳಾ ತಂಡ ಸ್ಪರ್ಧೆಯಲ್ಲಿ (10 ಕಿ.ಮೀ.) ಭಾರತ ಕಂಚಿನ ಪದಕ ಗೆದ್ದಿತು. ಜಪಾನ್ ಆರು ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡರೆ, ಚೀನಾ (17) ಎರಡನೇ ಸ್ಥಾನ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.