ADVERTISEMENT

ಹೊಸ ಕ್ರೀಡಾ ಬದುಕಿಗೆ ಸಿದ್ಧರಾಗಿ: ರಿಜಿಜು

ಶೀಘ್ರದಲ್ಲಿ ಯಾವುದೇ ಅಂತರರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸುವುದಿಲ್ಲ

ಪಿಟಿಐ
Published 23 ಮೇ 2020, 18:38 IST
Last Updated 23 ಮೇ 2020, 18:38 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ಭಾರತ ಶೀಘ್ರದಲ್ಲಿ ಯಾವುದೇ ಅಂತರರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸುತ್ತಿಲ್ಲ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಉಂಟಾಗಿರುವ ಈ ಬಿಕ್ಕಟ್ಟಿನ ವಾತಾವರಣದಲ್ಲಿ ಪ್ರೇಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳು ನಡೆಯಬಹುದು. ಈ ರೀತಿಯ ಹೊಸ ಕ್ರೀಡಾ ಜೀವನದೊಂದಿಗೆ ಬದುಕುವುದನ್ನು ಅಭಿಮಾನಿಗಳು ರೂಢಿಸಿಕೊಳ್ಳಬೇಕು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಒಂದು ವೇಳೆ ಮುಂದೂಡಿಕೆಯಾದರೆ ಇಂಡಿಯನ್‌ ಪ್ರೀಮಿಯರ್‌ ಲೀಗ್ಅನ್ನು‌ (ಐಪಿಎಲ್‌) ಅಕ್ಟೋಬರ್‌–ನವಂಬರ್‌ನಲ್ಲಿ ನಡೆಸಲುಬಿಸಿಸಿಐ ಬಯಸಿತ್ತು. ಈ ಹಿನ್ನೆಲೆಯಲ್ಲಿ ಕ್ರೀಡಾ ಸಚಿವರ ಈಗಿನ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.

‘ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ನಮ್ಮ ಪ್ರಯತ್ನ ಸಾಗಿದೆ. ಅದಕ್ಕಿಂತ ಪೂರ್ವದಲ್ಲಿ ಅಭ್ಯಾಸ ಹಾಗೂ ತರಬೇತಿಗಳ ಕುರಿತು ಗಮನಹರಿಸಬೇಕು. ಶೀಘ್ರದಲ್ಲಿ ಯಾವುದೇ ಟೂರ್ನಿಗಳನ್ನು ಆಯೋಜಿಸುವ ಸ್ಥಿತಿಯಲ್ಲಿ ನಾವಿಲ್ಲ’ ಎಂದು ರಿಜಿಜು ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ.

ADVERTISEMENT

ಜನರ ಆರೋಗ್ಯವನ್ನು ಅಪಾಯಕ್ಕೊಡ್ಡಲು ಬಯಸುವುದಿಲ್ಲ: ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ 13ನೇ ಆವೃತ್ತಿಯ ಐಪಿಎಲ್‌ ಭವಿಷ್ಯದ ಕುರಿತು ಮಾತನಾಡಿದ ರಿಜಿಜು ‘ಈ ಕುರಿತು ನಿರ್ಣಯ ತೆಗೆದುಕೊಳ್ಳಲು ಸರ್ಕಾರ ವಿಶೇಷಾಧಿಕಾರವನ್ನು ಹೊಂದಿದೆ. ಪರಿಸ್ಥಿತಿಯನ್ನು ಆಧರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಒಂದು ಟೂರ್ನಿ ನಡೆಸುವ ಉದ್ದೇಶದಿಂದ ಜನರ ಆರೋಗ್ಯವನ್ನು ಅಪಾಯಕ್ಕೆ ದೂಡಲು ನಾವು ಬಯಸುವುದಿಲ್ಲ’ ಎಂದಿದ್ದಾರೆ.

‘ಕೋವಿಡ್‌–19 ವಿರುದ್ಧದ ಹೋರಾಟ ನಮ್ಮ ಮೊದಲ ಆದ್ಯತೆ. ಅದರ ಜೊತೆಗೆ ಜನಜೀವನವೂ ಸಹಜಸ್ಥಿತಿಗೆ ಬರಬೇಕು. ಟೂರ್ನಿ ನಡೆಯುವ ದಿನಾಂಕಗಳನ್ನು ಖಚಿತಪಡಿಸುವುದು ಕಷ್ಟ. ಆದರೆ ಈ ವರ್ಷ ಒಂದಷ್ಟು ಕ್ರೀಡಾ ಚಟುವಟಿಕೆಗಳು ನಡೆಯವ ವಿಶ್ವಾಸವಿದೆ’ ಎಂದು ಅವರು ರಿಜಿಜು ನುಡಿದರು.

ದೇಶದಾದ್ಯಂತ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವ ಪ್ರಯತ್ನವಾಗಿ ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್‌) ಹಂತಹಂತವಾಗಿ ರೂಪಿಸುತ್ತಿರುವ ಕ್ರೀಡಾ ಸಚಿವಾಲಯ ಕಾರ್ಯನಿರ್ವಹಣೆಯ ಮಾನದಂಡ (ಎಸ್‌ಒಪಿ) ಕುರಿತೂ ಸಚಿವರು ಬೆಳಕು ಚೆಲ್ಲಿದರು.

‘ಅಥ್ಲೀಟ್‌ಗಳ ಫಿಟ್‌ನೆಸ್‌ ಮತ್ತಿತರ ವಿಷಯಗಳನ್ನು ಗಮನಿಸಲಾಗುತ್ತಿದೆ. ಅವರು ಕೋಚ್‌ ಹಾಗೂ ಫಿಟ್‌ನೆಸ್‌ ತಜ್ಞರು ಹಾಗೂ ಹೈ ಪರ್ಫಾರ್ಮನ್ಸ್‌ ನಿರ್ದೇಶಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಸಾಯ್‌ ವಿವರಣಾತ್ಮಕ ಎಸ್‌ಒಪಿ ಸಿದ್ಧಪಡಿಸುತ್ತಿದೆ. ಇದಕ್ಕೆ ವಿವಿಧ ಕ್ಷೇತ್ರಗಳ ಪರಿಣತರು ಕೈಜೋಡಿಸಿದ್ದಾರೆ. ಎಸ್‌ಒಪಿ ಆಧಾರದಲ್ಲಿ ತರಬೇತಿ ಆರಂಭವಾಗಲಿದೆ’ ಎಂದು ರಿಜಿಜು ವಿವರಿಸಿದ್ದಾರೆ.

‘ಆದರೂ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುವುದು ಸಂಪೂರ್ಣವಾಗಿ ಅವಲಂಬಿಸಿರುವುದು ಆಯಾ ರಾಜ್ಯಗಳು ಹಾಗೂ ಸ್ಥಳೀಯ ಆಡಳಿತ ರೂಪಿಸಿರುವ ಮಾರ್ಗಸೂಚಿಗಳು ಮೇಲೆ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಒಲಿಂಪಿಕ್ಸ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಜಿಜು’ ಟೋಕಿಯೊ ಕೂಟವು ಪರಿಷ್ಕೃತ ದಿನಾಂಕದ ಪ್ರಕಾರ ನಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.