ಜಾರ್ಜ್ ಫೋರ್‌ಮನ್
ಲಾಸ್ ಏಂಜಲಿಸ್: ಬಾಕ್ಸಿಂಗ್ ದಿಗ್ಗಜ, ಮಾಜಿ ವಿಶ್ವ ಹೆವಿವಿವೇಟ್ ಚಾಂಪಿಯನ್ ಅಮೆರಿಕದ ಜಾರ್ಜ್ ಫೋರ್ಮನ್ (76) ಅವರು ಶುಕ್ರವಾರ ಇಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.
ಜೈರೆಯ ಕಿನ್ಶಾಸಾದಲ್ಲಿ 1974ರಲ್ಲಿ ನಡೆದ ಪ್ರಸಿದ್ಧ ‘ರಂಬಲ್ ಇನ್ ದಿ ಜಂಗಲ್’ ಸೆಣಸಾಟದಲ್ಲಿ ಮುಹಮ್ಮದ್ ಅಲಿ ವಿರುದ್ಧ ಸೋತಿದ್ದ ಫೋರ್‌ಮನ್ ಎರಡು ದಶಕಗಳ ನಂತರ ಹೆವಿವೇಟ್ ಪಟ್ಟವನ್ನು ಮರಳಿ ಪಡೆದಿದ್ದರು.
‘ಬಿಗ್ ಜಾರ್ಜ್’ ಎಂದೇ ಖ್ಯಾತರಾಗಿದ್ದ ಅಜಾನಬಾಹು ಫೋರ್‌ಮನ್ ಶಾಲೆಯನ್ನು ಅರ್ಧದಲ್ಲೇ ಬಿಟ್ಟು ಬಾಕ್ಸಿಂಗ್‌ನಲ್ಲಿ ಎತ್ತರಕ್ಕೆ ಬೆಳೆದವರು. ಒಲಿಂಪಿಕ್ ಸ್ವರ್ಣ ಪದಕ ವಿಜೇತರಾದ ಅವರು ಎರಡು ಬಾರಿ ವಿಶ್ವ ಚಾಂಪಿಯನ್ ಆಗಿ ಮೆರೆದು ದಂತಕತೆಯಾದರು. ವೃತ್ತಿಪರನಾಗಿ 81 ಸೆಣಸಾಟಗಳಲ್ಲಿ ಭಾಗಿಯಾದ ಅವರು 76ರಲ್ಲಿ ಜಯಗಳಿಸಿದ್ದರು. ಇದರಲ್ಲಿ 68 ಸೆಣಸಾಟಗಳನ್ನು ನಾಕೌಟ್‌ನಲ್ಲಿ ಗೆದ್ದಿದ್ದು ಹೆಚ್ಚುಗಾರಿಕೆ. ಕ್ರೀಡೆಯ ಹೊರಗೂ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡವರು.
‘ನಮ್ಮೆಲ್ಲರ ಪ್ರೀತಿಪಾತ್ರರಾದ ಜಾರ್ಜ್ ಎಡ್ವರ್ಡ್ ಫೋರ್‌ಮನ್ ಸೀನಿಯರ್ ಅವರು ಮಾರ್ಚ್ 21ರಂದು ಚಿರನಿದ್ರೆಗೆ ಜಾರಿದರು’ ಎಂದು ಅವರ ಕುಟುಂಬ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದೆ.
‘ಬಾಕ್ಸಿಂಗ್ ಮತ್ತು ಅದರಾಚೆ ಅವರ ಕೊಡುಗೆಯನ್ನು ಎಂದೆಂದೂ ಮರೆಯುವಂತಿಲ್ಲ’ ಎಂದು ಇನ್ನೊಬ್ಬ ಮಾಜಿ ವಿಶ್ವ ಹೆವಿವೇಟ್ ಚಾಂಪಿಯನ್ ಮೈಕ್ ಟೈಸನ್ ಶೋಕ ಸೂಚಿಸಿದ್ದಾರೆ.
1949ರ ಜನವರಿ 10ರಂದು ಟೆಕ್ಸಾಸ್‌ನಲ್ಲಿ ಜನಿಸಿದ ಫೋರಮನ್ ಬೆಳೆದಿದ್ದು ಹೌಸ್ಟನ್‌ನಲ್ಲಿ. 13ನೇ ವಯಸ್ಸಿಗೆ ಅವರು 6 ಅಡಿ 2 ಇಂಚು ಎತ್ತರ ಬೆಳೆದಿದ್ದು, ಸುಮಾರು 91 ಕೆ.ಜಿ. ಭಾರ ಹೊಂದಿದ್ದರು. ಸಣ್ಣಪುಟ್ಟ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಾಲೆ ತ್ಯಜಿಸಿದ್ದರು. ಆ ವೇಳೆಯೇ ಅವರು ಬಾಕ್ಸಿಂಗ್‌ನತ್ತ ಆಕರ್ಷಿತರಾದರು.
ಒಂದೇ ವರ್ಷದಲ್ಲಿ 25 ಸೆಣಸಾಟದಲ್ಲಿ ಭಾಗಿಯಾದ ಅವರು ಒಲಿಂಪಿಕ್ ಚಿನ್ನದ ಪದಕ ಸಹ ಗೆದ್ದುಕೊಂಡರು. 1968ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ ಹೆವಿವೇಟ್ ವಿಭಾಗದ ಸ್ವರ್ಣ ಅವರ ಪಾಲಾಯಿತು.
ಜೈರೆಯ ಕಿನ್ಶಾಸಾದಲ್ಲಿ ನಡೆದ ರಂಬಲ್ ಇನ್ ದಿ ಜಂಗಲ್ ಎಂದೇ ಹೆಸರಾದ ವಿಶ್ವ ಹೆವಿವೇಟ್ ಬಾಕ್ಸಿಂಗ್ ಸೆಣಸಾಟದಲ್ಲಿ ಮುಹಮ್ಮದ್ ಅಲಿ (ಎಡಗಡೆ) ಸೆಣಸಾಡಿದ್ದ ಜಾರ್ಜ್ ಫೋರ್‌ಮನ್.
ಆಗಿನ ವಿಶ್ವ ಚಾಂಪಿಯನ್ ಜೋ ಫ್ರೇಜಿಯರ್ ಅವರನ್ನು ಎರಡೇ ಸುತ್ತುಗಳಲ್ಲಿ ಕೆಡವಿದ್ದರು. 1974ರ ಕಿನ್ಶಾಸಾ ಸೆಣಸಾಟದಲ್ಲಿ ಭಾಗಿಯಾಗುವ ಮೊದಲು 40 ವೃತ್ತಿಪರ ಸೆಣಸಾಟಗಳಲ್ಲೂ ಅವರು ಅಜೇಯರಾಗಿದ್ದರು. ಆದರೆ ಅಲಿ ಅವರ ಎದುರಿನ ಹಣಾಹಣಿಯ ಎಂಟನೇ ಸುತ್ತನಲ್ಲಿ ಸೋಲನುಭವಿಸಿದರು. ಈ ಸೋಲು ಅವರ ಸುತ್ತ ಹಬ್ಬಿದ್ದ ಪ್ರಭಾವಳಿಯನ್ನು ಮಸುಕುಗೊಳಿಸಿತು. ‘ವಿಶ್ವ ಪಟ್ಟ ಕಳೆದುಕೊಂಡಿದ್ದನ್ನು ನಂಬಲಾಗಲೇ ಇಲ್ಲ. ಇದು ನನ್ನ ಜೀವನದ ಅತಿ ಮುಜುಗರದ ಪ್ರಸಂಗ. ಆ ಸೋಲು ನನ್ನನ್ನು ಗಾಸಿಗೊಳಿಸಿತು’ ಎಂದು ನಂತರ ಪ್ರತಿಕ್ರಿಯಿಸಿದ್ದರು.
1977ರಲ್ಲಿ ಅವರು ಪ್ರಶಸ್ತಿಗೆ ಮತ್ತೊಂದು ಯತ್ನ ನಡೆಸಿದರೂ ಪೋರ್ಟೊರಿಕೊದಲ್ಲಿ ಜಿಮ್ಮಿ ಯಂಗ್ ಎದುರು ಸೋಲಬೇಕಾಯಿತು. 28ನೇ ವಯಸ್ಸಿನಲ್ಲೇ ಅವರು ನಿವೃತ್ತಿ ಹೇಳಿದರು. ಆದರೆ 10 ವರ್ಷಗಳ ಬಳಿಕ ಪುನರಾಗಮನ ಮಾಡಿದರು. ನಂತರದ ಮೂರು ವರ್ಷಗಳಲ್ಲಿ ಅವರು 21 ಸೆಣಸಾಟಗಳಲ್ಲಿ ಭಾಗಿಯಾದರು. ಎಲ್ಲದರಲ್ಲಿ ಗೆದ್ದರು. ಆದರೆ 1991ರಲ್ಲಿ ಇವಾಂಡರ್ ಹೋಲಿಫೀಲ್ಡ್ ಮತ್ತು ಎರಡು ವರ್ಷಗಳ ಬಳಿಕ ಟಾಮಿ ಮಾರಿಸನ್ ಎದುರು ಸೋತರು.
1996ರಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ತೋಳ್ಬಲ ಪ್ರದರ್ಶಿಸಿದ ಫೋರ್‌ಮನ್.
ಹೋಲಿಫೀಲ್ಡ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಮೈಕೆಲ್ ಮೂರರ್ ಅವರನ್ನು 1994ರ ನವೆಂಬರ್‌ನಲ್ಲಿ ಸೋಲಿಸಿ 20 ವರ್ಷಗಳ ಬಳಿಕ ಮರಳಿ ವಿಶ್ವ ಹೆವಿವೇಟ್ ಪ್ರಶಸ್ತಿ ಗೆದ್ದರು. ಅತಿ ಹಿರಿಯ (45 ವರ್ಷ, 299 ದಿನ) ಹೆವಿವೇಟ್ ಚಾಂಪಿಯನ್ ಎಂಬ ಹಿರಿಮೆ ಆಗ ಅವರದಾಗಿತ್ತು.
ಅವರು, ನಿಯೋಜಿತ ಬಾಕ್ಸರ್‌ಗಳ ಜೊತೆ ಸೆಣಸಾಡಲು ನಿರಾಕರಿಸಿದ ಕಾರಣ ಡಬ್ಲ್ಯುಬಿಎ ಮತ್ತು ಐಬಿಎಫ್ ಕಿರೀಟಗಳನ್ನು ಕಳೆದುಕೊಂಡರು. 1997ರಲ್ಲಿ ಎರಡನೇ ಬಾರಿ ನಿವೃತ್ತಿ ಘೋಷಿಸಿದರು.
1996ರಲ್ಲಿ ಟಿವಿ ಕಾರ್ಯಕ್ರಮ ‘ಬಾಬ್ ಡ್ಯಾಡ್ಸ್’ನ ಹೋಸ್ಟ್ ಆಗಿದ್ದ ಅವರು ನಾಲ್ಕು ಬಾರಿ ವಿವಾಹವಾಗಿದ್ದರು. ಹತ್ತು ಮಕ್ಕಳಿದ್ದರು. ಇಬ್ಬರನ್ನು ದತ್ತು ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.