ADVERTISEMENT

ಹಾಕಿ ಚಾಂಪಿಯನ್ಸ್‌ ಲೀಗ್‌ಗೆ ಚಾಲನೆ

ವರ್ಷದ ಮಟ್ಟಿಗೆ ಕೌಟುಂಬಿಕ ‘ಹಾಕಿ ಉತ್ಸವ’ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 20:09 IST
Last Updated 20 ಏಪ್ರಿಲ್ 2019, 20:09 IST

ವಿರಾಜಪೇಟೆ: ಕೊಡವ ಕುಟುಂಬಗಳ ಹಾಕಿ ಚಾಂಪಿಯನ್ಸ್‌ ಲೀಗ್‌ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ವಿರಾಜಪೇಟೆ ಸಮೀಪದ ಕಾಕೋಟುಪರಂಬು ಮೈದಾನದಲ್ಲಿ ಶನಿವಾರ ಚಾಲನೆ ದೊರೆಯಿತು.

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕೊಡವ ಕೌಟುಂಬಿಕ ‘ಹಾಕಿ ಉತ್ಸವ’ ನಡೆಯುತ್ತಿತ್ತು. ಕಳೆದ ವರ್ಷ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಿಂದ ಹಾಕಿ ಉತ್ಸವ ಕೈಬಿಟ್ಟು, ಹಾಕಿ ಕೂರ್ಗ್ ಆಶ್ರಯದಲ್ಲಿ ಲೀಗ್‌ ನಡೆಸಲಾಗುತ್ತಿದೆ. 2019ರ ಕೌಟುಂಬಿಕ ಹಾಕಿ ಉತ್ಸವವು ಹರಿಹರ ಮುಕ್ಕಾಟಿರ ಕುಟುಂಬಸ್ಥರ ನೇತೃತ್ವದಲ್ಲಿ ನಡೆಯಬೇಕಿತ್ತು. ಆದರೆ, ವರ್ಷದ ಮಟ್ಟಿಗೆ ಮುಂದೂಡಲಾಗಿದೆ.

ಅಂತರರಾಷ್ಟ್ರೀಯ ಹಾಕಿ ಆಟಗಾರ ಅಂಜಪರವಂಡ ಸುಬ್ಬಯ್ಯ ಹಾಗೂ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಫೋರಂ ಅಧ್ಯಕ್ಷ ಕಂಡ್ರತಂಡ ಸುಬ್ಬಯ್ಯ ಅವರು ಹಾಕಿ ಲೀಗ್‌ಗೆ ಚಾಲನೆ ನೀಡಿದರು.

ADVERTISEMENT

ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಚಾಂಪಿಯನ್‌ ಹಾಗೂ ದ್ವಿತೀಯ ಸ್ಥಾನ ಪಡೆದಿರುವ 10 ತಂಡಗಳು ಚಾಂಪಿಯನ್ಸ್‌ ಲೀಗ್‌ನಲ್ಲಿ ಪಾಲ್ಗೊಂಡಿವೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಒಟ್ಟು 149 ತಂಡಗಳು ಸೆಣಸಲಿವೆ. ಫೈನಲ್‌ ಪಂದ್ಯ ಮೇ 10ರಂದು ನಡೆಯಲಿದೆ.

ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಚೆಪ್ಪುಡಿರ ತಂಡ 2–0 ಗೋಲುಗಳಿಂದ ಕಲಿಯಂಡ ತಂಡವನ್ನು ಮಣಿಸಿತು. ಚೆಪ್ಪುಡಿರ ತಂಡದ ಸೋಮಣ್ಣ ಹಾಗೂ ದಿವನ್‌ ಗೋಲು ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ಕೂತಂಡ ತಂಡ 3–0 ರಲ್ಲಿ ಮುಕ್ಕಾಟಿರ ತಂಡವನ್ನು ಸೋಲಿಸಿತು. ಕೂತಂಡ ತಂಡದ ಪರವಾಗಿ ದೇವಯ್ಯ, ಸಂತೋಷ್‌, ಬೋಪಣ್ಣ ಗೋಲು ದಾಖಲಿಸಿ ಜಯ ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.