ADVERTISEMENT

ಬೆಲ್ಜಿಯಂ ಬೆರಗಿನಾಟಕ್ಕೆ ಒಲಿದ ವಿಶ್ವಕಪ್

ಫೈನಲ್‌ನಲ್ಲಿ ಮೊದಲ ಬಾರಿ ಶೂಟ್ ಆಫ್‌, ಸಡನ್‌ ಡೆತ್‌ ಮೂಲಕ ಫಲಿತಾಂಶ ನಿರ್ಣಯ

ಪಿಟಿಐ
Published 16 ಡಿಸೆಂಬರ್ 2018, 20:17 IST
Last Updated 16 ಡಿಸೆಂಬರ್ 2018, 20:17 IST
ಫೈನಲ್‌ ಪಂದ್ಯದಲ್ಲಿ ಗೆದ್ದ ನಂತರ ಬೆಲ್ಜಿಯಂ ತಂಡದ ಆಟಗಾರರು ಸಂಭ್ರಮಿಸಿದ ಪರಿ –ಎಎಫ್‌ಪಿ ಚಿತ್ರ
ಫೈನಲ್‌ ಪಂದ್ಯದಲ್ಲಿ ಗೆದ್ದ ನಂತರ ಬೆಲ್ಜಿಯಂ ತಂಡದ ಆಟಗಾರರು ಸಂಭ್ರಮಿಸಿದ ಪರಿ –ಎಎಫ್‌ಪಿ ಚಿತ್ರ   

ಭುವನೇಶ್ವರ: ನೆದರ್ಲೆಂಡ್ಸ್‌ನ ಭಾರಿ ಪ್ರತಿರೋಧವನ್ನು ಲೆಕ್ಕಿಸದೆ ಛಲದಿಂದ ಕಾದಾಡಿದ ಬೆಲ್ಜಿಯಂ ತಂಡ ವಿಶ್ವಕಪ್ ಹಾಕಿ ಟೂರ್ನಿಯ ಚೊಚ್ಚಲ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಕಳಿಂಗ ಕ್ರೀಡಾಂಗದಲ್ಲಿ ಭಾನುವಾರ ರಾತ್ರಿ ನಡೆದ ರೋಮಾಂಚಕಾರಿ ಹಣಾಹಣಿಯಲ್ಲಿ ಕಳೆದ ಬಾರಿಯ ರನ್ನರ್ ಅಪ್‌ ನೆದರ್ಲೆಂಡ್ಸ್ ತಂಡವನ್ನು ಬೆಲ್ಜಿಯಂ ಸಡನ್ ಡೆತ್‌ನಲ್ಲಿ 3–2ರಿಂದ ಮಣಿಸಿತು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ಆದ್ದರಿಂದ ಶೂಟ್ ಆಫ್‌ಗೆ ಮೊರೆ ಹೋಗಲಾಯಿತು. ಈ ಹಂತದ ಕೊನೆಯ ಪ್ರಯತ್ನದಲ್ಲಿ ಚೆಂಡನ್ನು ಗುರಿ ಸೇರಿಸಿದ ಬೆಲ್ಜಿಯಂ 3–2ರ ಮುನ್ನಡೆಯೊಂದಿಗೆ ಸಂಭ್ರಮಿಸಿತು. ಆದರೆ ಎದುರಾಳಿ ತಂಡದ ಗೋಲ್‌ ಕೀಪರ್‌ ಪರ್ಮಿನ್‌ ಬ್ಲಾಕ್‌ ಅವರು ಅಂಪೈರ್‌ಗೆ ಮನವಿ ಸಲ್ಲಿಸಿದ್ದರಿಂದ ತೀರ್ಪು ಮರುಪರಿಶೀಲಿಸಲಾಯಿತು.

ADVERTISEMENT

ಆರ್ಥರ್ ಸ್ಲೂವರ್‌ ಗೋಲು ಗಳಿಸುವ ಸಂದರ್ಭದಲ್ಲಿ ತಪ್ಪೆಸಗಿದ್ದು ಸಾಬೀತಾದ ಕಾರಣ ಪಂದ್ಯ 2–2ರಲ್ಲಿ ಸಮ ಆಗಿರುವುದಾಗಿ ಘೋಷಿಸ ಲಾಯಿತು. ಹೀಗಾಗಿ ಸಡನ್ ಡೆತ್‌ ಮೊರೆ ಹೋಗಲಾಯಿತು. ಈ ಬಾರಿ ಆರ್ಥರ್ ಸ್ಲೂವರ್‌ ಚೆಂಡನ್ನು ಸಮರ್ಥವಾಗಿ ಗುರಿ ಮುಟ್ಟಿಸಿದರು. ನೆದರ್ಲೆಂಡ್ಸ್‌ನ ಮಿರ್ಕೊ ಪ್ರೂಜ್ನರ್‌ ಅವರನ್ನು ಬೆಲ್ಜಿಯಂನ ಗೋಲ್‌ಕೀಪರ್ ವಿನ್ಸೆಂಟ್ ವಾನ್ಶ್‌ ತಡೆಯುತ್ತಿದ್ದಂತೆ ಬೆಲ್ಜಿಯಂ ಪಾಳ ಯದಲ್ಲಿ ಸಂತಸದ ಹೊಳೆ ಹರಿಯಿತು.

ಪ್ರಥಮಾರ್ಧದಲ್ಲಿ ಮುನ್ನಡೆ ಗಳಿಸಲು ಉಭಯ ತಂಡಗಳು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದ ಥಾಮಸ್‌ ಬ್ರೀಲ್ಸ್‌ ನೇತೃತ್ವದ ಬೆಲ್ಜಿಯಂ ಮತ್ತು ಸೆಮಿಫೈನಲ್‌ನಲ್ಲಿ ಛಲದಿಂದ ಹೋರಾಡಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ಬಿಲಿ ಬೇಕರ್‌ ನಾಯಕತ್ವದ ನೆದರ್ಲೆಂಡ್ಸ್‌ ತಂಡದವರು ಮೊದಲ ಎರಡು ಕ್ವಾರ್ಟರ್‌ಗಳಲ್ಲೂ ಜಿದ್ದಾಜಿದ್ದಿಯ ಪೈಪೋಟಿ ನಡೆಸಿ ಪ್ರೇಕ್ಷಕರ ಮನ ಗೆದ್ದರು.

ಮೊದಲ ಕ್ವಾರ್ಟರ್‌ನಲ್ಲಿ ನೆದ ರ್ಲೆಂಡ್ಸ್ ಹೆಚ್ಚು ಆಕ್ರಮಣಕಾರಿ ಆಟ ಆಡಿದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಪ್ರಬಲ ತಿರುಗೇಟು ನೀಡಲು ಮುಂದಾಯಿತು. ಮೊದಲ ಕ್ವಾರ್ಟರ್‌ ನಲ್ಲಿ ನೆದರ್ಲೆಂಡ್ಸ್ ನಾಲ್ಕು ಬಾರಿ ಎದುರಾಳಿ ತಂಡದ ಆವರಣದಲ್ಲಿ ಆತಂಕ ಸೃಷ್ಟಿಸಿತು. ಅದರೆ ಬೆಲ್ಜಿಯಂ ರಕ್ಷಣಾ ಗೋಡೆಯನ್ನು ಕೆಡವಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಎರಡನೇ ಕ್ವಾರ್ಟರ್‌ನಲ್ಲಿ ನೆದ ರ್ಲೆಂಡ್ಸ್ ಮೂರು ಬಾರಿ ಮತ್ತು ಬೆಲ್ಜಿಯಂ ಎರಡು ಸಲ ಎದುರಾಳಿಗಳ ಆವರಣಕ್ಕೆ ನುಗ್ಗಿತು. ಈ ಹಂತದಲ್ಲಿ ನೆದರ್ಲೆಂಡ್ಸ್‌ಗೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದ್ದವು. ಆದರೆ ಅವುಗಳ ಸದುಪಯೋಗ ಪಡೆಯಲು ಬೆಲ್ಜಿಯಂ ಅನುವು ಮಾಡಿಕೊಡಲಿಲ್ಲ.

ವಿಶ್ವಕಪ್ ಇತಿಹಾಸದಲ್ಲಿ ಮೊದಲು: ಮೂರನೇ ಕ್ವಾರ್ಟರ್‌ನಲ್ಲೂ ಪ್ರೇಕ್ಷಕರು ಉಸಿರು ಬಿಗಿ ಹಿಡಿದು ಪೈಪೋಟಿಗೆ ಸಾಕ್ಷಿಯಾದರು.

ಈ ಕ್ವಾರ್ಟರ್‌ನಲ್ಲೂ ತಂಡಗಳು ಸಮಬಲದ ಸಾಮರ್ಥ್ಯ ತೋರಿದವು. ನೆದರ್ಲೆಂಡ್ಸ್ ಐದು ಬಾರಿ ಮತ್ತು ಬೆಲ್ಜಿಯಂ ನಾಲ್ಕು ಬಾರಿ ಎದುರಾಳಿ ಆವರಣಕ್ಕೆ ನುಗ್ಗಿದರೂ ಚೆಂಡನ್ನು ಗುರಿ ಸೇರಿಸಲು ಆಗಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲೂ ಪರಿಸ್ಥಿತಿ ಬದಲಾಗಲಿಲ್ಲ. ಆದ್ದರಿಂದ ಶೂಟ್‌ ಆಫ್‌ ಮೂಲಕ ಫಲಿತಾಂಶ ನಿರ್ಣಯಿಸಲು ನಿರ್ಧರಿ ಸಲಾಯಿತು.

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶೂಟ್‌ ಆಫ್‌ ಬಳಕೆಯಾದದ್ದು ಇದೇ ಮೊದಲು.

ರಂಗು ತುಂಬಿದ ಸಚಿನ್‌ ತೆಂಡೂಲ್ಕರ್‌
ಫೈನಲ್‌ ಪಂದ್ಯ ವೀಕ್ಷಿಸಿದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಪ್ರೇಕ್ಷಕ ರನ್ನು ರೋಮಾಂಚನಗೊಳಿಸಿದರು. ಗಣ್ಯರ ಗ್ಯಾಲರಿ ಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪಕ್ಕದಲ್ಲಿ ಕುಳಿತ ಸಚಿನ್‌, ಉಭಯ ತಂಡಗಳ ಪೈಪೋಟಿಯ ಪ್ರತಿ ಕ್ಷಣವನ್ನೂ ಆಸ್ವಾದಿಸಿದರು.

‌ಮಧ್ಯಂತರ ಅವಧಿಯಲ್ಲಿ ಅವರನ್ನು ಅಂಗಣಕ್ಕೆ ಕರೆತರ ಲಾಯಿತು. ಈ ಸಂದರ್ಭದಲ್ಲಿ ನಿರೂಪಕಿ ಜೊತೆ ಮಾತನಾಡಿ ‘ಹಾಕಿ ಕ್ರೀಡೆಯಲ್ಲಿ ಆಟಗಾರರ ವೇಗ ಮತ್ತು ಚಾಕಚಕ್ಯತೆ ನೋಡಲು ಇಷ್ಟವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.