ADVERTISEMENT

ಹಾಕಿ: ‘ಮ್ಯಾಜಿಕ್‌ ಸ್ಕಿಲ್‌ ಪ್ರಶಸ್ತಿ’ ರೇಸ್‌ನಲ್ಲಿ ದೀಪಿಕಾ ಗೋಲು

ಪಿಟಿಐ
Published 6 ಜುಲೈ 2025, 13:28 IST
Last Updated 6 ಜುಲೈ 2025, 13:28 IST
ದೀಪಿಕಾ
ಪಿಟಿಐ ಸಂಗ್ರಹ ಚಿತ್ರ
ದೀಪಿಕಾ ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ದೀಪಿಕಾ ಅವರು ವಿಶ್ವದ ಅಗ್ರಮಾನ್ಯ ತಂಡ ನೆದರ್ಲೆಂಡ್ಸ್‌ ವಿರುದ್ಧ 2024–25ರ ಸಾಲಿನ ಪ್ರೊ ಲೀಗ್‌ ಪಂದ್ಯದ ವೇಳೆ ಗಳಿಸಿದ ಅಮೋಘ ಫೀಲ್ಡ್‌ ಗೋಲು ‘ಪಾಲಿಗ್ರಾಸ್‌ ಮ್ಯಾಜಿಕ್‌ ಸ್ಕಿಲ್‌’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಚಮತ್ಕಾರಿಕ ಗೋಲು ಹೊಡೆಯುವ ಆಟಗಾರ್ತಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ಪಾಲಿಗ್ರಾಸ್‌ ಮ್ಯಾಜಿಕ್‌ ಸ್ಕಿಲ್‌ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಶುಕ್ರವಾರ ಪ್ರಕಟಿಸಲಾಗಿದೆ. ಜುಲೈ 14ರ ಬೆಳಿಗ್ಗೆ 3.29ರವರೆಗೆ (ಭಾರತೀಯ ಕಾಲಮಾನ) ಮತದಾನಕ್ಕೆ ಗಡುವು ಇದೆ.

ಈ ವರ್ಷ (2024–25) ನಾಮನಿರ್ದೇಶನಗೊಂಡ ಗೋಲುಗಳಲ್ಲಿ ಯಾವುದು ಇಷ್ಟವಾಗಿದೆ ಎಂದು ಮತಹಾಕಲು ವಿಶ್ವದೆಲ್ಲೆಡೆಯ ಹಾಕಿ ಅಭಿಮಾನಿಗಳಿಗೆ ಅವಕಾಶ ಇದೆ.

ADVERTISEMENT

ಫೆಬ್ರುವರಿಯಲ್ಲಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪ್ರೊ ಲೀಗ್‌ ಪಂದ್ಯದಲ್ಲಿ ದೀಪಿಕಾ ಅವರು ನೆದರ್ಲೆಂಡ್ಸ್‌ ವಿರುದ್ಧ ಈ ಗೋಲು ಗಳಿಸಿದ್ದರು. ಪಂದ್ಯ ನಿಗದಿತ ಅವಧಿಯಲ್ಲಿ 2–2 ಡ್ರಾ ಆದ ನಂತರ ವಿಜೇತರ ನಿರ್ಧಾರಕ್ಕೆ ನಡೆದ ಶೂಟೌಟ್‌ನಲ್ಲಿ ಭಾರತ ತಂಡ ಜಯಗಳಿಸಿತ್ತು.‌

ಭಾರತ ಎರಡು ಗೋಲುಗಳಿಂದ ಹಿಂದೆಯಿದ್ದಾಗ ದೀಪಿಕಾ ಅವರು ಆ ಅತ್ಯಾಕರ್ಷಕ ಫೀಲ್ಡ್‌ ಗೋಲು ಗಳಿಸಿದ್ದರು. ಎಡಭಾಗದಿಂದ ಚೆಂಡನ್ನು ಡ್ರಿಬಲ್‌ ಮಾಡುತ್ತ ಎದುರಾಳಿ ರಕ್ಷಣೆ ಆಟಗಾರ್ತಿಯ ಸ್ಟಿಕ್‌ ಮೇಲಿಂದ ಚೆಂಡನ್ನು ದಾಟಿಸಿ, ಗೋಲ್‌ ಕೀಪರ್‌ ಅವರನ್ನು ತಪ್ಪಿಸಿ ಗಳಿಸಿದ ಆ ಗೋಲು ಗಮನ ಸೆಳೆದಿತ್ತು.

‘ನೆದರ್ಲೆಂಡ್ಸ್ ಎದುರಿನ ಆ ಗೋಲು ನನ್ನ ಹಾಕಿ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದು. ಎಲ್ಲವೂ ನಿರೀಕ್ಷೆಗೆ ತಕ್ಕಂತೆ ಸಾಗಿತು. ಆ ಗೋಲಿನಿಂದ ನಮಗೆ ಸ್ಕೋರ್ ಸಮಮಾಡಲು ಸಾಧ್ಯವಾಯಿತು. ಈ ಪ್ರಶಸ್ತಿ ನಾಮನಿರ್ದೇಶನ ಮಾಡಿದ್ದು ನನಗೆ ಗೌರವದ ಸಂಗತಿ’ ಎಂದಿದ್ದಾರೆ ದೀಪಿಕಾ.

ಸ್ಪೇನಿನ ಪೆಟ್ರೀಷಿಯಾ ಅಲ್ವಾರೆಝ್ (ಆಸ್ಟ್ರೇಲಿಯಾ ವಿರುದ್ಧ) ಮತ್ತು ಆಸ್ಟ್ರೇಲಿಯಾ ಆಟಗಾರ್ತಿಯರ ಸಾಂಘಿಕ ಗೋಲು (ಇಂಗ್ಲೆಂಡ್‌ ವಿರುದ್ಧ) ಸಹ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.