ಹಾಕಿ ಇಂಡಿಯಾ ಲೀಗ್
ನವದೆಹಲಿ: ಲಿಯಾಮ್ ಹೆಂಡರ್ಸನ್ ಅವರು ಬುಧವಾರ ನಡೆದ ಹೀರೊ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಮಿನಿ ಹರಾಜಿನಲ್ಲಿ ₹42 ಲಕ್ಷ ಮೊತ್ತ ಪಡೆದು ಅತಿಹೆಚ್ಚು ಮೌಲ್ಯ ಪಡೆದ ಆಟಗಾರ ಎನಿಸಿದರು. ವೇದಾಂತ ಕಳಿಂಗ ಲ್ಯಾನ್ಸರ್ಸ್ ತಂಡ ಆಸ್ಟ್ರೇಲಿಯಾದ ಈ ರಕ್ಷಣೆ ಆಟಗಾರನನ್ನು ತನ್ನ ಪಾಲುಮಾಡಿಕೊಂಡಿತು.
ಭಾರತದ ಪ್ರತಿಭಾನ್ವಿತ ಜೂನಿಯರ್ ಆಟಗಾರರಾದ ವಿವೇಕ್ ಲಾಕ್ರಾ ಮತ್ತು ಅದ್ರೋಹಿತ್ ಎಕ್ಕಾ ಕೂಡ ಹರಾಜಿನಲ್ಲಿ ಗಮನ ಸೆಳೆದರು. ₹2 ಲಕ್ಷದ ಮೂಲಬೆಲೆ ಹೊಂದಿದ್ದ ಹದಿಹರೆಯದ ಗೋಲ್‌ಕೀಪರ್ ಲಾಕ್ರಾ ₹23 ಲಕ್ಷ ಮೊತ್ತಕ್ಕೆ ಶ್ರಾಚಿ ರಾರ್ ಬೆಂಗಾಲ್ ಟೈಗರ್ಸ್ ಪಾಲಾದರು. ಮಿಡ್‌ಫೀಲ್ಡರ್ ಎಕ್ಕಾ ಅವರನ್ನು ತಮಿಳುಮಾಡು ಡ್ರಾಗನ್ಸ್ ₹11 ಲಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತು.
14 ವರ್ಷ ವಯಸ್ಸಿನ ಕೇತನ್ ಕುಶ್ವಾಹ ಅವರನ್ನು ಬೆಂಗಾಲ್ ಟೈಗರ್ಸ್ ₹2.5 ಲಕ್ಷ ಮೊತ್ತಕ್ಕೆ ಪಡೆಯಿತು.
ಅಂತರರಾಷ್ಟ್ರೀಯ ಆಟಗಾರರಲ್ಲಿ ಡಚ್ ರಕ್ಷಣೆ ಆಟಗಾರ ಸ್ಯಾಂಡರ್ ಡಿ ವಿಯ್ನ್ ಅವರು ₹36 ಲಕ್ಷಕ್ಕೆ ತಮಿಳುನಾಡು ಡ್ರಾಗನ್ಸ್ ಪಾಲಾದರು.
ಅನುಭವಿ ಡ್ರ್ಯಾಗ್‌ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅವರನ್ನು ಎಸ್‌ಜಿ ಪೈಪರ್ಸ್ ತಂಡವು ₹12 ಲಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತು. ರೂಪಿಂದರ್ ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಬೆಂಗಾಲ್ ಟೈಗರ್ಸ್ ತಂಡದ ನಾಯಕರಾಗಿದ್ದರು.
ಆರ್ಥಿಕ ಸಮಸ್ಯೆ ಕಾರಣ ಯುಪಿ ರುದ್ರಾ ಫ್ರಾಂಚೈಸಿ ಈ ವಾರದ ಆರಂಭದಲ್ಲಿ ಲೀಗ್‌ನಿಂದ ಹಿಂದೆ ಸರಿದಿತ್ತು. ಹೀಗಾಗಿ ಹಾಕಿ ಇಂಡಿಯಾ ಲೀಗ್, ಇದರ ಆಡಳಿತವನ್ನು ವಹಿಸಿಕೊಂಡಿದೆ. ಹೊಸ ಫ್ರಾಂಚೈಸಿ ಮಾಲೀಕರು ಬರುವವರೆಗೆ ಎಚ್‌ಐಎಲ್ ಇದರ ಆಡಳಿತ ನೋಡಿಕೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.