ADVERTISEMENT

ಹಾಕಿ ಆಟಗಾರರಿಗೆ ಮನೆಗೆ ತೆರಳುವ ಅವಕಾಶ

ಭಾರತ ಪುರುಷ, ಮಹಿಳಾ ಮತ್ತು ಜೂನಿಯರ್ ತಂಡಗಳ ಸೂಕ್ಷ್ಮ ನಿರ್ವಹಣೆ

ಪಿಟಿಐ
Published 23 ಮೇ 2020, 19:35 IST
Last Updated 23 ಮೇ 2020, 19:35 IST
ಹಾಕಿ ಇಂಡಿಯಾ
ಹಾಕಿ ಇಂಡಿಯಾ   

ನವದೆಹಲಿ: ಎರಡು ತಿಂಗಳಿಂದ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಬೆಂಗಳೂರಿನಲ್ಲಿರುವ ದಕ್ಷಿಣ ಕೇಂದ್ರದಲ್ಲಿ ‘ಗೃಹಬಂಧನ’ದಲ್ಲಿರುವ ಹಾಕಿ ಆಟಗಾರರು ತಮ್ಮೂರಿಗೆ ತೆರಳಲು ಇಚ್ಛಿಸುವುದಾದರೆ ಹೋಗಬಹುದು. ಆದರೆ ತರಬೇತಿ ಶಿಬಿರಕ್ಕೆ ವಾಪಸಾದಾಗ 14 ದಿನ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು ಎಂದು ಹಾಕಿ ಇಂಡಿಯಾ ತಿಳಿಸಿದೆ.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿರುವ ಭಾರತ ಹಾಕಿಯ ಪುರುಷ ಮತ್ತು ಮಹಿಳಾ ತಂಡಗಳನ್ನು ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಉನ್ನತ ಮಟ್ಟದಲ್ಲಿ ನಿರ್ವಹಿಸುತ್ತಿದೆ. ಮುಂದಿನ ವರ್ಷ ಜೂನಿಯರ್ ವಿಶ್ವಕಪ್‌ ಟೂರ್ನಿ ನಡೆಯಲಿರುವುದರಿಂದ ಕಿರಿಯರ ತಂಡಗಳಿಗೂ ತರಬೇತಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಸಂಸ್ಥೆ ಮುಂದಾಗಿದೆ.

‘ಸಾಯ್ ಆವರಣವನ್ನು ಕೊರೊನಾ ವೈರಾಣು ಮುಕ್ತವಾಗಿರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಕೇಂದ್ರದಿಂದ ಹೊರಗೆ ಇದ್ದಾಗಲೂ ಆಟಗಾರರ ಮೇಲೆ ಕಾಳಜಿ ವಹಿಸಲಾಗುತ್ತಿದೆ. ಸರ್ಕಾರ, ಕ್ರೀಡಾ‍ಪ್ರಾಧಿಕಾರ ಮತ್ತು ಹಾಕಿ ಇಂಡಿಯಾ ಜೊತೆಗೂಡಿ ಚರ್ಚಿಸಿ ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಮನೆಗೆ ತೆರಳುವ ಅವಕಾಶ ನೀಡಲು ನಿರ್ಧರಿಸಿದೆ. ಆದರೆ ಅವರು ಎಲ್ಲ ಷರತ್ತುಗಳನ್ನು ಪಾಲಿಸಬೇಕು’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

‘ಮನೆಗೆ ತೆರಳುವವರು ಯಾವಾಗ ವಾಪಸ್ ಬರಬೇಕು ಎಂಬುದನ್ನು ಅವರ ಮುಖ್ಯ ಕೋಚ್ ನಿರ್ಧರಿಸಲಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕು, ಹ್ಯಾಂಡ್‌ ಸ್ಯಾನಿಟೈಸರ್ ಜೊತೆಯಲ್ಲಿ ಇರಿಸಬೇಕು. ಮನೆಯಲ್ಲಿ ಸಂದರ್ಶಕರಿಗೆ ಅವಕಾಶ ನೀಡಬಾರದು. ಒಬ್ಬಂಟಿಯಾಗಿ ವ್ಯಾಯಾಮ ಮಾಡಬೇಕು. ವಾಪಸ್ ಮರಳಿದ ನಂತರ ಎರಡು ವಾರ ಪ್ರತ್ಯೇಕವಾಗಿ ಇರಬೇಕು’ ಎಂದು ಸಂಸ್ಥೆ ತಿಳಿಸಿದೆ.

ಮಾರ್ಚ್ 25ರಂದು ಲಾಕ್‌ಡೌನ್ ಆರಂಭವಾದಾಗಿನಿಂದ ಕೊಠಡಿಯಲ್ಲೇ ಉಳಿದಿರುವ ತಂಡಗಳ ಸದಸ್ಯರು ಇತ್ತೀಚೆಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರೊಂದಿಗೆ ಆನ್‌ಲೈನ್ ಮೂಲಕ ನಡೆಸಿದ ಸಂವಾದದ ಸಂದರ್ಭದಲ್ಲಿ ತೆರೆದ ಅಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದರು.

ಇದಕ್ಕೆ ಸಚಿವರು ಒಪ್ಪಿದ್ದರು. ಆದರೆ ತಂಡದ ಪ್ರತಿಯೊಬ್ಬರೂ ತಮ್ಮದೇ ನೀರಿನ ಬಾಟಲ್ ತೆಗೆದುಕೊಂಡು ಬರಬೇಕು, ಇತರ ಯಾರೂ ಅದನ್ನು ಮುಟ್ಟಬಾರದು. ತರಬೇತಿ ವೇಳೆ ಮತ್ತು ನಂತರ ಬಳಸಲು ವೈಯಕ್ತಿಕ ಟವೆಲ್ ತೆಗೆದುಕೊಂಡು ಬರಬೇಕು. ತರಬೇತಿ ಸಂದರ್ಭದಲ್ಲಿ ಆಟಗಾರರು ಮತ್ತು ಕೋಚ್ ಮಾತ್ರ ಅಂಗಣದಲ್ಲಿ ಇರಬೇಕು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.