ADVERTISEMENT

ವಿಶ್ವಕಪ್ ಹಾಕಿ: ಇಂಗ್ಲೆಂಡ್‌ಗೆ ಶರಣಾದ ಐರ್ಲೆಂಡ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 17:44 IST
Last Updated 7 ಡಿಸೆಂಬರ್ 2018, 17:44 IST
ಇಂಗ್ಲೆಂಡ್‌ ಆಟಗಾರರ ಖುಷಿಯ ಕ್ಷಣ –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ ಆಟಗಾರರ ಖುಷಿಯ ಕ್ಷಣ –ಎಎಫ್‌ಪಿ ಚಿತ್ರ   

ಭುವನೇಶ್ವರ: ಚುರುಕಿನ ಆಟ ಆಡಿದ ಇಂಗ್ಲೆಂಡ್‌ ತಂಡದವರು ಈ ಬಾರಿಯ ಹಾಕಿ ವಿಶ್ವಕಪ್‌ನಲ್ಲಿ ಮೊದಲ ಗೆಲುವು ದಾಖಲಿಸಿದ್ದಾರೆ.

ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಬಿ’ ಗುಂಪಿನ ಹೋರಾಟದಲ್ಲಿ ಇಂಗ್ಲೆಂಡ್‌ 4–2 ಗೋಲುಗಳಿಂದ ಐರ್ಲೆಂಡ್‌ ತಂಡವನ್ನು ಸೋಲಿಸಿತು.

ಮೊದಲ ಪಂದ್ಯದಲ್ಲಿ ಚೀನಾ ಎದುರು 2–2 ಗೋಲುಗಳಿಂದ ಡ್ರಾ ಮಾಡಿಕೊಂಡಿದ್ದ ಆಂಗ್ಲರ ನಾಡಿನ ತಂಡ ನಂತರದ ಹೋರಾಟದಲ್ಲಿ ಆಸ್ಟ್ರೇಲಿಯಾಕ್ಕೆ ಮಣಿದಿತ್ತು.

ADVERTISEMENT

ಗೆಲ್ಲಲೇಬೇಕಾದ ಒತ್ತಡದೊಂದಿಗೆ ಅಂಗಳಕ್ಕಿಳಿದಿದ್ದ ‍ಪಿನ್ನರ್‌ ಜಾರ್ಜ್‌ ಸಾರಥ್ಯದ ಇಂಗ್ಲೆಂಡ್‌ ತಂಡ 15ನೇ ನಿಮಿಷದಲ್ಲಿ ಖಾತೆ ತೆರೆಯಿತು. ಡೇವಿಡ್‌ ಕಾಂಡೊನ್‌ ಫೀಲ್ಡ್‌ ಗೋಲು ಬಾರಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಹೀಗಾಗಿ ಯಾರಿಗೂ ಗೋಲು ಗಳಿಸಲು ಆಗಲಿಲ್ಲ.

ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. 35ನೇ ನಿಮಿಷದಲ್ಲಿ ಐರ್ಲೆಂಡ್‌ ತಂಡದ ಕ್ರಿಸ್‌ ಕಾರ್ಗೊ ಫೀಲ್ಡ್‌ ಗೋಲು ಬಾರಿಸಿ 1–1 ಸಮಬಲಕ್ಕೆ ಕಾರಣರಾದರು. ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಸಮಯ ಉಳಿಯಲು ಇಂಗ್ಲೆಂಡ್‌ ತಂಡದ ಲಿಯಾಮ್‌ ಅನ್ಸೆಲ್‌ ಅವಕಾಶ ನೀಡಲಿಲ್ಲ. 37ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅವರು ಆಂಗ್ಲರ ನಾಡಿನ ತಂಡಕ್ಕೆ 2–1 ಮುನ್ನಡೆ ತಂದುಕೊಟ್ಟರು. ಇದರ ಬೆನಲ್ಲೇ ಐರ್ಲೆಂಡ್‌ ತಂಡಕ್ಕೆ ‍ಪೆನಾಲ್ಟಿ ಕಾರ್ನರ್‌ ಲಭ್ಯವಾಯಿತು. ಈ ಅವಕಾಶವನ್ನು ಶೇನ್‌ ಒಡೊನೊಗ್‌ ಸದುಪಯೋಗಪ‍ಡಿಸಿಕೊಂಡರು. ಚುರುಕಾಗಿ ಚೆಂಡನ್ನು ಗುರಿ ಸೇರಿಸಿದ ಅವರು 2–2 ಸಮಬಲಕ್ಕೆ ಕಾರಣರಾದರು.

ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು. 38ನೇ ನಿಮಿಷದಲ್ಲಿ ಜೇಮ್ಸ್‌ ಗಾಲ್‌ ಗೋಲು ಹೊಡೆದು ಇಂಗ್ಲೆಂಡ್‌ ತಂಡದ ಗೆಲುವಿನ ಹಾದಿ ಸುಗಮ ಮಾಡಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಐರ್ಲೆಂಡ್‌ ತಂಡ ಸಮಬಲದ ಗೋಲು ಗಳಿಸಲು ಸಾಕಷ್ಟು ಶ್ರಮಿಸಿತು. ಡೇವಿಡ್‌ ಹಾರ್ಟ್‌ ಪಡೆಯ ಆಟಗಾರರ ಪ್ರಯತ್ನಗಳಿಗೆ ಇಂಗ್ಲೆಂಡ್‌ ತಂಡದ ಗೋಲ್‌ಕೀಪರ್‌ ಜಾರ್ಜ್‌ ಅಡ್ಡಿಯಾದರು. 60ನೇ ನಿಮಿಷದಲ್ಲಿ ಆಂಗ್ಲರ ನಾಡಿನ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತು. ಈ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಮಾರ್ಕ್‌ ಗ್ಲೆಗೋರ್ನ್‌, ಪಿನ್ನರ್‌ ಜಾರ್ಜ್‌ ಪಡೆಯ ಆಟಗಾರರು ಖುಷಿಯ ಕಡಲಲ್ಲಿ ಮಿಂದೇಳುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.