ADVERTISEMENT

ಹಾಕಿ ವಿಶ್ವಕಪ್ ವಿಜಯ ಅವಿಸ್ಮರಣೀಯ: ಅಜಿತ್ ಪಾಲ್ ಸಿಂಗ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 5:01 IST
Last Updated 15 ಮಾರ್ಚ್ 2025, 5:01 IST
   

ಬೆಂಗಳೂರು: ‘ವಿಶ್ವಕಪ್ ಜಯಿಸಿದ ಸಾಧನೆಗೆ ಈಗ 50 ವರ್ಷ ತುಂಬಿದೆ. ಈ ಸುವರ್ಣ ಸಂಭ್ರಮವನ್ನು ನೋಡಲು ನಾವು ಬದುಕಿದ್ದೇವೆ. ಇದು ಆ ದೇವರ ಕೃಪೆ’–

1975ರಲ್ಲಿ ಹಾಕಿ ವಿಶ್ವಕಪ್ ಜಯಿಸಿದ್ದ ಭಾರತ ತಂಡದ ನಾಯಕ ಅಜಿತ್ ಪಾಲ್ ಸಿಂಗ್ ಅವರ ನುಡಿಗಳಿವು. ಅವರ ನಾಯಕತ್ವದಲ್ಲಿ ಭಾರತವು ಮೊದಲ ಬಾರಿಗೆ ವಿಶ್ವಕಪ್ ವಿಜಯ ಸಾಧಿಸಿದ ಆ ದಿನಕ್ಕೆ ಶನಿವಾರ 50 ವರ್ಷ ತುಂಬಲಿದೆ.

‘ಹಾಕಿ ಕ್ರೀಡೆಯಲ್ಲಿ ನಮ್ಮದು ಅಗ್ರಮಾನ್ಯ ತಂಡವಾಗಿತ್ತು. ಕಟ್ಟಾ ಎದುರಾಳಿಯಾಗಿದ್ದ ಪಾಕಿಸ್ತಾನವನ್ನು ಸೋಲಿಸುವುದು ನಮ್ಮ ಗುರಿಯಾಗಿತ್ತು. ಫೈನಲ್‌ನಲ್ಲಿ ಅದನ್ನು ಸಾಧಿಸಿದೆವು. ಭಾರತಮತ್ತು ಪಾಕ್ ನಡುವಣ ಪಂದ್ಯವೆಂದರೆ ಕಠಿಣ ಪೈಪೋಟಿ ತಾರಕಕ್ಕೇರುವುದು ಸಹಜ. ಆ ಫೈನಲ್‌ನಲ್ಲಿಯೂ ಅಂತಹ ಒತ್ತಡ, ಬಿಸಿ , ವಾಗ್ವಾದಗಳೆಲ್ಲವೂ ಇದ್ದವು. ಅದೊಂದು ಐತಿಹಾಸಿಕ ಪಂದ್ಯ’ ಎಂದು ಸಿಂಗ್ ಸ್ಮರಿಸಿದರು.

ADVERTISEMENT

ಆ ಪಂದ್ಯದಲ್ಲಿ ಕರ್ನಾಟಕದ ಇಬ್ಬರು ಹಾಕಿ ಆಟಗಾರರೂ ಆಡಿದ್ದರು. ಕೊಡಗಿನವರಾದ ಬಿ.ಪಿ. ಗೋವಿಂದ ಮತ್ತು ಪಿ.ಇ. ಕಾಳಯ್ಯ ಅವರು ತಂಡವನ್ನು ಪ್ರತಿನಿಧಿಸಿದ್ದರು.

‘ಆ ಟೂರ್ನಿಯಲ್ಲಿ ನಮ್ಮ ಅಭಿಯಾನವು ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಸೋಲಿನೊಂದಿಗೆ ಆರಂಭವಾಗಿತ್ತು. ನಂತರದ ಪಂದ್ಯಗಳಲ್ಲಿ ಪುಟಿದೆದ್ದು ಫೈನಲ್ ತಲುಪಿದೆವು. ಪಾಕ್ ಎದುರು ಜಯಿಸಿದೆವು. ಭಾರತಕ್ಕೆ ಮರಳಿದಾಗ ಒಂದು ವಿಚಿತ್ರ ಸಂಗತಿ ನಡೆಯಿತು. ನಮ್ಮನ್ನು ಚೆನ್ನೈಗೆ ಕರೆಸಿಕೊಳ್ಳಲಾಯಿತು. ನಂತರ ಅಲ್ಲಿಂದ ದೆಹಲಿಗೆ ವಿಮಾನ ಮೂಲಕ ಕಳುಹಿಸಲಾಯಿತು. ಆ ದಿನಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ಭದ್ರತೆ ಇರುತ್ತಿರಲಿಲ್ಲ. ಪಾಲಂ ವಿಮಾನ ನಿಲ್ದಾಣದಲ್ಲಿ ನಮ್ಮ ವಿಮಾನದತ್ತಲೇ ಬಂದ ಅಭಿಮಾನಿಗಳು ಎಲ್ಲ ಆಟಗಾರರನ್ನು ಎತ್ತಿ ಮೆರವಣಿಗೆ ಹೊರಟರು. ನಿಲ್ಧಾಣದಿಂದ ಹೊರ ಬಂದ ನಂತರ ಮತ್ತೆ ಎಲ್ಲ ಆಟಗಾರರೂ ಜೊತೆಗೂಡಿದೆವು. ಅದೊಂದು ಅವಿಸ್ಮರಣೀಯ ಕ್ಷಣ‘ 1973 ರಿಂದ 76ರ ಅವಧಿಯಲ್ಲಿದ್ದ ತಂಡವು ಶ್ರೇಷ್ಠವಾಗಿತ್ತು’ ಎಂದು ಬಿ.ಪಿ. ಗೋವಿಂದ ನೆನಪಿಸಿಕೊಳ್ಳುತ್ತಾರೆ.

‘ಬಲ್‌ಬೀರ್ ಸಿಂಗ್ ನಮ್ಮ ಮ್ಯಾನೇಜರ್ ಆಗಿದ್ದರು. ಟೂರ್ನಿಗೂ ಮುನ್ನ 3 ತಿಂಗಳು ಚಂಡೀಗಡದಲ್ಲಿ ತರಬೇತಿ ಶಿಬಿರ ನಡೆದಿ್ತು. ಅವರು ನಮ್ಮನ್ನೆಲ್ಲ ಬಹಳಚೆನ್ನಾಗಿ ನೋಡಿಕೊಂಡಿದ್ದರು. ಅಜಿತ್ ಬಹಳ ಉತ್ತಮವಾದ ನಾಯಕ. ಆ ದಿನ ನಾವು ಅಮೋಘ ಸಾಧನೆ ಮಾಡಿದೆವು’ ಎಂದು ಕಾಳಯ್ಯ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.