ADVERTISEMENT

Hong Kong Open: ಕರ್ನಾಟಕದ ಆಯುಷ್ ಕ್ವಾರ್ಟರ್‌ಗೆ ಲಗ್ಗೆ; ಲಕ್ಷ್ಯ ಎದುರಾಳಿ

ಹಾಂಗ್‌ಕಾಂಗ್‌ ಓಪನ್‌: ಲಕ್ಷ್ಯ ಸೇನ್, ಸಾತ್ವಿಕ್‌–ಚಿರಾಗ್ ಜೋಡಿ ಮುನ್ನಡೆ

ಪಿಟಿಐ
Published 11 ಸೆಪ್ಟೆಂಬರ್ 2025, 10:53 IST
Last Updated 11 ಸೆಪ್ಟೆಂಬರ್ 2025, 10:53 IST
<div class="paragraphs"><p>ಆಯುಷ್ ಶೆಟ್ಟಿ</p></div>

ಆಯುಷ್ ಶೆಟ್ಟಿ

   

ಹಾಂಗ್‌ಕಾಂಗ್‌: ಭಾರತದ ಉದಯೋನ್ಮುಖ ಆಟಗಾರ ಆಯುಷ್‌ ಶೆಟ್ಟಿ ಅವರು ಹಾಂಗ್‌ಕಾಂಗ್‌ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ 2023ರ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತ ಕೊಡೈ ನರವೋಕಾ ಅವರಿಗೆ ಆಘಾತ ನೀಡಿ ಪುರುಷರ ಸಿಂಗಲ್ಸ್‌ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟರು.

ಕನ್ನಡಿಗ ಆಯುಷ್‌ ಶೆಟ್ಟಿ ಆಕ್ರಮಣಕಾರಿ ಆಟ ಮತ್ತು ಉತ್ತಮ ಅಂಕಣದುದ್ದಕ್ಕೂ ಓಡಾಡಿ ಜಪಾನ್‌ನ ಆಟಗಾರನನ್ನು ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ 21–19, 12–21, 21–14 ರಿಂದ ಸೋಲಿಸಿದರು. ಪಂದ್ಯ 72 ನಿಮಿಷ ನಡೆಯಿತು. ನರವೋಕಾ, ವಿಶ್ವ ಕ್ರಮಾಂಕದಲ್ಲಿ ಈ ಹಿಂದೆ ಎರಡನೇ ಸ್ಥಾನದವರೆಗೆ ಏರಿದ್ದರು.

ADVERTISEMENT

20 ವರ್ಷ ವಯಸ್ಸಿನ ಆಯುಷ್‌ ಅವರು ಎಂಟರ ಘಟ್ಟದ ಪಂದ್ಯದಲ್ಲಿ ಸ್ವದೇಶದ ಆಟಗಾರ, ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ಜೊತೆಗಾರ ಲಕ್ಷ್ಯ ಸೇನ್ ಅವರನ್ನು ಎದುರಿಸಲಿದ್ದಾರೆ.

ಇದಕ್ಕೆ ಮೊದಲು ಲಕ್ಷ್ಯ ಅವರು ಎರಡನೇ ಸುತ್ತಿನಲ್ಲಿ ಹಿನ್ನಡೆಯಿಂದ ಚೇತರಿಸಿ ಸ್ವದೇಶದ ಎಚ್‌.ಎಸ್‌.ಪ್ರಣಯ್ ಅವರನ್ನು 15–21, 21–18 21–10 ರಿಂದ ಸೋಲಿಸಿದರು. 20ನೇ ಕ್ರಮಾಂಕದ ಲಕ್ಷ್ಯ ಅವರು ಆರು ತಿಂಗಳಲ್ಲಿ ಇದೇ ಮೊದಲ ಬಾರಿ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಸ್ಪರ್ಧೆಯೊಂದರ ಎಂಟರ ಘಟ್ಟ ತಲುಪಿದರು.

ಈ ಟೂರ್ನಿಯು ಸುಮಾರು ₹4 ಕೋಟಿ ಬಹುಮಾನ ಮೊತ್ತ ಹೊಂದಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ 23 ವರ್ಷ ವಯಸ್ಸಿನ ಲಕ್ಷ್ಯ ಈ ವರ್ಷ ಗಾಯದ ಸಮಸ್ಯೆಯ ಜೊತೆ ಒಳ್ಳೆಯ ಲಯದಲ್ಲೂ ಇರಲಿಲ್ಲ. ಕೊನೆಯ ಬಾರಿ, ಮಾರ್ಚ್‌ನಲ್ಲಿ ಆಲ್‌ ಇಂಗ್ಲೆಂಡ್ ಸೂಪರ್ 1000 ಟೂರ್ನಿಯ ಸೆಮಿಫೈನಲ್ ತಲುಪಿದ್ದರು.

ಸಾತ್ವಿಕ್‌–ಚಿರಾಗ್ ಮುನ್ನಡೆ:

ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಸಾತ್ವಿಕ್‌–ಚಿರಾಗ್ ಜೋಡಿ ಪುರುಷರ ಡಬಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ18–21, 21–15, 21–11 ರಿಂದ ಥಾಯ್ಲೆಂಡ್‌ನ ಪೀರತ್‌ಚೈ ಸುಖ್‌ಫುನ್‌– ಪಕ್ಕಾಪೊನ್ ತೀರರಾತ್‌ಸಕುಲ್‌ ಜೋಡಿಯನ್ನು ಸೋಲಿಸಿತು.

ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಅನುಭವಿ ಆಟಗಾರರ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ ಮಲೇಷ್ಯಾದ ಜುನೈದಿ ಅರಿಫ್‌– ರಾಯ್‌ ಕಿಂಗ್ ಯಾಪ್‌ ಅವರನ್ನು ಎದುರಿಸಲಿದ್ದಾರೆ.

2023ರಲ್ಲಿ ವಿಶ್ವ ಜೂನಿಯರ್ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಆಯುಷ್‌ ಶೆಟ್ಟಿ ಮೊದಲ ಗೇಮ್‌ನಲ್ಲಿ ಪ್ರಬಲ ಸ್ಮ್ಯಾಶ್‌ಗಳ ಮೂಲಕ ನರವೋಕಾ ಅವರಿಗೆ ಕುದುರಿಕೊಳ್ಳಲು ಬಿಡಲಿಲ್ಲ. ಆಯುಷ್‌ 2–5, 9–12, 13–15ರಲ್ಲಿ ಹಿಂದೆಯಿದ್ದರೂ ಅಂತಿಮವಾಗಿ 21–19ರಲ್ಲಿ ಗೇಮ್ ಪಡೆದರು. 

ಎರಡನೇ ಗೇಮ್‌ನಲ್ಲಿ ನರವೋಕಾ ತಿರುಗೇಟು ನೀಡಿದರು. 11–5ರಲ್ಲಿ ಮುನ್ನಡೆ ಪಡೆದ ಅವರು ಗೇಮ್‌ಅನ್ನು ಸುಲಭವಾಗಿ ಪಡೆದರು. ಇದರಿಂದ ವಿಚಲಿತರಾಗದೇ ಏಕಾಗ್ರತೆಯಿಂದ ಆಡಿದ ಆಯುಷ್‌ ಅಂತಿಮ ಗೇಮ್‌ನಲ್ಲಿ ಮೇಲುಗೈ ಪಡೆದರು. 8–4 ರಲ್ಲಿ ನಂತರ ಬಿರುಸಿನ ರಿಟರ್ನ್‌ಗಳ ಮೂಲಕ 17–10ರಲ್ಲಿ ಮುನ್ನಡೆ ಪಡೆದು ಸುಲಭವಾಗಿ ಗೇಮ್ ಹಾಗೂ ಪಂದ್ಯ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.