ADVERTISEMENT

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಣಯ್‌, ಲಕ್ಷ್ಯ ಸೇನ್‌ಗೆ ಮುನ್ನಡೆ

ಪಿಟಿಐ
Published 21 ಆಗಸ್ಟ್ 2023, 15:33 IST
Last Updated 21 ಆಗಸ್ಟ್ 2023, 15:33 IST
ಎಚ್‌.ಎಸ್‌. ಪ್ರಣಯ್‌
ಎಚ್‌.ಎಸ್‌. ಪ್ರಣಯ್‌   

ಕೋಪನ್‌ಹೆಗನ್‌: ಭಾರತದ ಭರವಸೆಯ ಆಟಗಾರರೆನಿಸಿರುವ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಯ ಸೇನ್‌ ಅವರು ಸೋಮವಾರ ಇಲ್ಲಿ ಆರಂಭವಾದ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ನೇರ ಗೇಮ್‌ಗಳ ಗೆಲುವಿನೊಡನೆ ಎರಡನೇ ಸುತ್ತು ಪ್ರವೇಶಿಸಿದರು.

ಕಳೆದ ಎರಡು ಆವೃತ್ತಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ, ಪ್ರಸ್ತುತ ವಿಶ್ವದ 9ನೇ ಕ್ರಮಾಂಕದಲ್ಲಿರುವ ಪ್ರಣಯ್‌ ಅವರು ಮೊದಲ ಸುತ್ತಿನಲ್ಲಿ ಫಿನ್ಲೆಂಡ್‌ನ ಕ್ಯಾಲೆ ಕೊಲ್ಜೊನೆನ್ ಅವರನ್ನು 24–22, 21–10ರಿಂದ ಮಣಿಸಿದರು. ಈ ಮೂಲಕ ಕ್ಯಾಲೆ ವಿರುದ್ಧ ಗೆಲುವಿನ ದಾಖಲೆಯನ್ನು 3–0ಗೆ ಹೆಚ್ಚಿಸಿದರು. 31 ವರ್ಷದ ಪ್ರಣಯ್‌ ಎರಡನೇ ಸುತ್ತಿನಲ್ಲಿ ಇಂಡೋನೇಷ್ಯಾದ ಚಿಕೊ ಔರಾ ದ್ವಿ ವಾರ್ಡೋಯೊ ಅವರನ್ನು ಎದುರಿಸಲಿದ್ದಾರೆ. 

ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಅವರು ಮಾರಿಷಸ್‌ನ ಜಾರ್ಜಸ್ ಜೂಲಿಯನ್ ಪೌಲ್ ಅವರನ್ನು 21–12, 21–7ರಿಂದ ಸೋಲಿಸಿದರು. 2021ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಸೇನ್‌ ಅವರಿಗೆ ಮುಂದಿನ ಸುತ್ತಿನಲ್ಲಿ ಕೊರಿಯಾದ ಜಿಯೋನ್ ಹ್ಯೊಕ್ ಜಿನ್ ಎದುರಾಗುವ ಸಾಧ್ಯತೆ ಇದೆ.

ADVERTISEMENT

ಪ್ರಣಯ್‌ ಮತ್ತು ಕ್ಯಾಲೆ ನಡುವಿನ ಪಂದ್ಯದ ಮೊದಲ ಗೇಮ್‌ ಹೋರಾಟದಿಂದ ಕೂಡಿತ್ತು. ಪ್ರಣಯ್ ಆರಂಭದಲ್ಲಿ 4–8ರ ಹಿನ್ನಡೆ ಅನುಭವಿಸಿದರೂ ನಂತರ ಪುಟಿದ್ದೆದ್ದು, ಸತತ ಏಳು ಪಾಯಿಂಟ್‌ ಸಂಪಾದಿಸಿ ಮುನ್ನಡೆ ಪಡೆದರು. ಕೊನೆಯವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಗೇಮ್‌ನಲ್ಲಿ ಭಾರತದ ಆಟಗಾರ ಮೇಲುಗೈ ಸಾಧಿಸಿದರು. ಎರಡನೇ ಗೇಮ್‌ ಅನ್ನು ಗೆಲ್ಲಲು ಪ್ರಣಯ್‌ ಹೆಚ್ಚು ಕಷ್ಟಪಡಲಿಲ್ಲ.

ಲಕ್ಷ್ಯ ಸೇನ್‌ ಅವರು ಜಾರ್ಜಸ್ ವಿರುದ್ಧದ ಪಂದ್ಯದಲ್ಲಿ ಆರಂಭದಿಂದಲೇ ಹಿಡಿತ ಸಾಧಿಸಿದರು. ಎದುರಾಳಿ ಆಟಗಾರ ತುಸು ಪ್ರತಿರೋಧ ತೋರಲು ಪ್ರಯತ್ನಿಸಿದರೂ ಅದಕ್ಕೆ ಅವಕಾಶ ನೀಡದ ಸೇನ್‌, ಕೇವಲ 25 ನಿಮಿಷಗಳಲ್ಲೇ ಪಂದ್ಯವನ್ನು ಮುಗಿಸಿದರು.

ಇದಕ್ಕೂ ಮೊದಲು ನಡೆದ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಭಾರತದ ರೋಹನ್‌ ಕಪೂರ್‌ ಮತ್ತು ಎನ್‌. ಸಿಕ್ಕಿ ರೆಡ್ಡಿ ಜೋಡಿಯು ಸ್ಕಾಟ್ಲೆಂಡ್‌ನ ಆ್ಯಡಮ್ ಹಾಲ್ ಮತ್ತು ಜೂಲಿ ಮ್ಯಾಕ್‌ಫರ್ಸನ್ ಎದುರು 14-21, 22-20, 18-21ರಿಂದ ಪರಾಭವಗೊಂಡರು.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಐದು ಪದಕ ಗೆದ್ದಿರುವ ಭಾರತದ ಪಿ.ವಿ. ಸಿಂಧು ಅವರು ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದಾರೆ.

ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿಗೆ ಮತ್ತು ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ- ಗಾಯತ್ರಿ ಗೋಪಿಚಂದ್ ಜೋಡಿಗೂ ಆರಂಭಿಕ ಸುತ್ತಿನಲ್ಲಿ ಬೈ ದೊರಕಿದೆ.

ಲಕ್ಷ್ಯ ಸೇನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.