ಮಿಯಾಮಿ : ವೃತ್ತಿಪರ ಕುಸ್ತಿಯ ದಿಗ್ಗಜ ಹಲ್ಕ್ ಹಾಗನ್ (71) ಗುರುವಾರ ನಿಧನರಾದರು ಎಂದು ಅಮೆರಿಕದ ಮಾಧ್ಯಮಗಳು ವರದಿಮಾಡಿವೆ.
6.7 ಅಡಿ ಎತ್ತರದ ಅಜಾನುಬಾಹು ಆಗಿದ್ದ ಹಲ್ಕ್ ಅವರ ಹ್ಯಾಂಡಲ್‌ಬಾರ್ ಮೀಸೆ ಮತ್ತು ಕುಸ್ತಿಯ ಶೈಲಿ ಜನಪ್ರಿಯವಾಗಿದ್ದವು. ಅವರು ಫ್ಲಾರಿಡಾದಲ್ಲಿರುವ ತಮ್ಮ ಮನೆಯಲ್ಲಿಯೇ ‘ಹೃದಯಸ್ತಂಭನ’ದಿಂದಾಗಿ ನಿಧನರಾದರು ಎಂದು ಮೂಲಗಳು ತಿಳಿಸಿವೆ.
ಹಲ್ಕ್ ಅವರ ಮೂಲ ಹೆಸರು ಟೆರಿ ಬೊಲಿ. ವಿಶ್ವ ರೆಸ್ಲಿಂಗ್ ಫೆಡರೇಷನ್ (ಡಬ್ಲ್ಯುಡಬ್ಲ್ಯುಎಫ್ ಈಗ ಡಬ್ಲ್ಯುಡಬ್ಲ್ಯುಇ) ಆಯೋಜಿಸುವ ಪ್ರೊ ರೆಸ್ಲಿಂಗ್‌ನಲ್ಲಿ 1979ರಲ್ಲಿ ಮೊದಲ ಬಾರಿಗೆ ಅವರು ಕಣಕ್ಕಿಳಿದಿದ್ದರು. ಆಗಿನ ಪ್ರಸಿದ್ಧ ಕುಸ್ತಿಪಟುಗಳಾದ ಆ್ಯಂಡ್ರೆ ದ ಜೈಂಟ್ ಮತ್ತು ರಾಡಿ ಪೈಪರ್ ಅವರೊಂದಿಗೆ ಪೈಪೋಟಿ ನಡೆಸಿದರು.
ಹಲ್ಕ್ ಅವರು ಪ್ರೊ ರೆಸ್ಲಿಂಗ್ ಅಷ್ಟೇ ಅಲ್ಲ, ಸಿನಿಮಾ ಮತ್ತು ಕಿರುತೆರೆ ಮೂಲಕವೂ ಜನಪ್ರಿಯರಾಗಿದ್ದರು. ‘ರಾಕಿ 3‘, ನೋ ಹೋಲ್ಡ್ಸ್ ಬಾರ್‌ಡ್‘ ಚಿತ್ರಗಳು ಮತ್ತು ‘ಬೇ ವಾಚ್’ ಟಿ.ವಿ. ಶೋನಲ್ಲಿ ಅವರು ನಟಿಸಿದ್ದರು. 2005ರಲ್ಲಿ ಅವರಿಗೆ ಡಬ್ಲ್ಯುಡಬ್ಲ್ಯುಇ ಹಾಲ್ ಆಫ್ ಫೇಮ್ ಗೌರವ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.