ADVERTISEMENT

ಕಾಲ್ಚಳಕದ ಹೊಸಪುಳಕ ಫೂಸ್‌ಬಾಲ್‌

ಪ್ರಮೋದ
Published 12 ಜುಲೈ 2020, 19:30 IST
Last Updated 12 ಜುಲೈ 2020, 19:30 IST
ಅರ್ಜೆಂಟೀನಾದಲ್ಲಿ ಹವ್ಯಾಸಿ ಆಟಗಾರರು ಹ್ಯೂಮನ್‌ ಫೂಸ್‌ಬಾಲ್‌ ಪಂದ್ಯ ಆಡಿದ ರೀತಿ
ಅರ್ಜೆಂಟೀನಾದಲ್ಲಿ ಹವ್ಯಾಸಿ ಆಟಗಾರರು ಹ್ಯೂಮನ್‌ ಫೂಸ್‌ಬಾಲ್‌ ಪಂದ್ಯ ಆಡಿದ ರೀತಿ   

ಭಾರತದಲ್ಲಿ ಧರ್ಮವೆಂದು ಪೂಜಿಸುವ ಕ್ರಿಕೆಟ್‌ ಅನ್ನು ಮತ್ತು ಅರ್ಜೆಂಟೀನಾದಲ್ಲಿ ಕ್ರೀಡಾ ಸಂಸ್ಕೃತಿ ಎಂದು ಭಾವಿಸಿರುವ ಫುಟ್‌ಬಾಲ್‌ ಚಟುವಟಿಕೆಗಳು ಇಲ್ಲದ ದಿನಗಳನ್ನು ನೆನಪಿಸಿಕೊಳ್ಳಲು ಈ ಎರಡೂ ದೇಶಗಳ ಕ್ರೀಡಾಪ್ರೇಮಿಗಳಿಗೆ ಸಾಧ್ಯವೇ ಇಲ್ಲ.

ವರ್ಷಪೂರ್ತಿ ಒಂದಲ್ಲ ಒಂದು ಕ್ರೀಡಾ ಟೂರ್ನಿಗಳು ನಡೆಯುತ್ತಲೇ ಇರುತ್ತವೆ. ಭಾರತದ ಜನರಿಗೆ ನಿತ್ಯ ಬೆಳಿಗ್ಗೆ ಚಹಾ ಕುಡಿಯುವುದು ಹೇಗೆ ಅಭ್ಯಾಸವೊ; ಅರ್ಜೆಂಟೀನಾದ ಕ್ರೀಡಾಪ್ರೇಮಿಗಳಿಗೆ ನಿತ್ಯ ಒಂದಾದರೂ ಫುಟ್‌ಬಾಲ್‌ ಪಂದ್ಯಗಳನ್ನು ನೋಡುವ ಆಸೆ.

ಆದರೆ, ಕೊರೊನಾ ಸೋಂಕು ಹರಡುವ ಭೀತಿಯಿಂದ ಕಳೆದ ಆರು ತಿಂಗಳುಗಳಿಂದ ಅಲ್ಲಿ ಒಂದೇ ಒಂದು ವೃತ್ತಿಪರ ಫುಟ್‌ಬಾಲ್‌ ಟೂರ್ನಿಗಳು ನಡೆದಿಲ್ಲ. ಕಾಲ್ಚೆಂಡಿನಾಟದ ಸೊಬಗು ಇಲ್ಲದ ದಿನಗಳನ್ನು ಕಳೆಯಲು ಆಟಗಾರರಿಗೆ ಹಾಗೂ ಕ್ರೀಡಾಪ್ರೇಮಿಗಳಿಗೆ ಸಾಧ್ಯವಾಗುತ್ತಿಲ್ಲ. ಆಡುವ ಮತ್ತು ನೋಡುವ ಬಯಕೆ ತಣಿಸಿಕೊಳ್ಳುವ ಸಲುವಾಗಿ ಅಲ್ಲಿ ಯ ಫುಟ್‌ಬಾಲ್‌ನಲ್ಲಿ ಹೊಸ ಅನ್ವೇಷಣೆಯಾಗಿದೆ.

ADVERTISEMENT

ಬಹಳಷ್ಟು ದೇಶಗಳಲ್ಲಿ ಫೈವ್‌ ಎ ಸೈಡ್‌ ಫುಟ್‌ಬಾಲ್‌ ಪಂದ್ಯಗಳನ್ನು ಆಡುತ್ತಾರೆ. ಆದರೆ, ಕೊರೊನಾ ಕಷ್ಟದ ಕಾಲದಲ್ಲಿ ಸುರಕ್ಷತೆಗೆ ಒತ್ತು ಕೊಟ್ಟು ‘ಹ್ಯೂಮನ್‌ ಫೂಸ್‌ಬಾಲ್‌’ ಎನ್ನುವ ಹೊಸ ಮಾದರಿಯ ಕ್ರೀಡೆ ಆರಂಭವಾಗಿದೆ. ಇದರಲ್ಲಿ ಅರ್ಜೆಂಟೀನಾದ ವೃತ್ತಿಪರ ಹಾಗೂ ಹವ್ಯಾಸಿ ಆಟಗಾರರು ಪಾಲ್ಗೊಂಡಿದ್ದಾರೆ.

ಮುಟ್ಟುವಂತಿಲ್ಲ

ಫುಟ್‌ಬಾಲ್‌ ಎಂದರೆ ಸಾಕು; ಚೆಂಡಿನ ಮೇಲೆ ಹಿಡಿತ ಸಾಧಿಸಲು ಆಟಗಾರರ ನಡುವೆ ಜಿದ್ದಾಜಿದ್ದಿ ಇದ್ದೇ ಇರುತ್ತದೆ. ಎದುರಾಳಿ ತಂಡದ ಆಟಗಾರನ ಹಿಡಿತದಿಂದ ಚೆಂಡು ಕಸಿದುಕೊಂಡು ಅದನ್ನು ಗುರಿ ಸೇರಿಸುವ ಛಲವಿರುತ್ತದೆ. ಆದರೆ, ‘ಹ್ಯೂಮನ್‌ ಫೂಸ್‌ಬಾಲ್‌’ನಲ್ಲಿ ಎದುರಾಳಿ ಆಟಗಾರನ ಹಿಡಿತದಲ್ಲಿ ಕಣ್ಣೆದುರೇ ಚೆಂಡಿದ್ದರೂ ಮುಟ್ಟುವಂತಿಲ್ಲ! ಹಿಡಿತದಿಂದ ಚೆಂಡು ಹೊರಬರುವ ತನಕ ಎದುರಿನ ಆಟಗಾರನನ್ನು ನೋಡಿಕೊಂಡೇ ನಿಂತಿರಬೇಕು. ಇದನ್ನು ಸ್ಥಳೀಯವಾಗಿ ಮೆಟ್‌ಗೋಲ್‌ ಹ್ಯೂಮನ್‌ ಕ್ರೀಡೆ ಎಂತಲೂ ಕರೆಯುತ್ತಾರೆ.

ಅರ್ಜೆಂಟೀನಾದಲ್ಲಿ ಈಗ 90 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. 1,700ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಆದ್ದರಿಂದ ಆ ದೇಶದ ರಾಜಧಾನಿ ಬ್ಯೂನಸ್‌ ಐರಿಸ್‌ ಸೇರಿದಂತೆ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರಗಳಲ್ಲಿ ಕಠಿಣವಾಗಿ ಲಾಕ್‌ಡೌನ್‌ ಹೇರಲು ಅಲ್ಲಿನ ಸರ್ಕಾರ ಸಿದ್ಧತೆ ನಡೆಸಿದೆ. ಆದ್ದರಿಂದ ಒಂದೇ ಜಾಗದಲ್ಲಿ ಹತ್ತು ಜನಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಆದ್ದರಿಂದ ‘ಹ್ಯೂಮನ್‌ ಫೂಸ್‌ಬಾಲ್‌’ ಪಂದ್ಯದ ವೇಳೆ ಪ್ರತಿ ತಂಡದಲ್ಲಿ ತಲಾ ಐವರು ಆಟಗಾರರಷ್ಟೇ ಇರುತ್ತಾರೆ. ಮೈದಾನದ ಅಳತೆಯೂ ಕಡಿಮೆ ಇರುತ್ತದೆ.

ಒಂದು ತಂಡದಲ್ಲಿ ಗೋಲ್‌ ಕೀಪರ್‌, ಡಿಫೆಂಡರ್‌, ಮಿಡ್‌ಫೀಲ್ಡರ್‌ ಮತ್ತು ಇಬ್ಬರು ಫಾರ್ವರ್ಡ್‌ ಆಟಗಾರರು ಇರಬೇಕು ಎನ್ನುವ ನಿಯಮವಿದೆ. ಆಟಗಾರರು ಪಂದ್ಯಗಳನ್ನು ಆಡಲು ಬಂದರೆ ಒಂದು ವಾರದ ತನಕ ವಾಪಸ್ ಮನೆಗೆ ಹೋಗದೆ ಒಂದೇ ಕಡೆ ಇರಬೇಕು. ಪ್ರತಿ ಪಂದ್ಯದ ವೇಳೆಯೂ ಮಾಸ್ಕ್ ಧರಿಸಿ, ಸ್ವಚ್ಛ ಶೂಗಳನ್ನು ಹಾಕಿಕೊಂಡು ಆಡಬೇಕು ಎನ್ನುವ ನಿಯಮ ಕಡ್ಡಾಯಗೊಳಿಸಲಾಗಿದೆ. ಟೂರ್ನಿ ಮುಗಿಸಿಕೊಂಡು ಹೋದ ಬಳಿಕ ಆಟಗಾರರು ಮನೆಗಳಲ್ಲಿ ಕ್ವಾರಂಟೈನ್‌ ಆಗಿರಬೇಕು.

ಸೋಂಕಿನ ಭೀತಿ ಹಾಗೂ ಇಷ್ಟೆಲ್ಲ ನಿಯಮಗಳಿದ್ದರೂ ಹೊಸ ಮಾದರಿಯ ’ಹ್ಯೂಮನ್‌ ಫೂಸ್‌ಬಾಲ್‌‘ನಲ್ಲಿ ಆಡಲು ಆಟಗಾರರು ಕಾಯುತ್ತಿದ್ದಾರೆ. ಬ್ಯೂನಸ್‌ ಐರಿಸ್‌ನಿಂದ 150 ಕಿ.ಮೀ. ದೂರದಲ್ಲಿ ಒಂದೇ ಕ್ರೀಡಾ ಸಂಕೀರ್ಣದಲ್ಲಿ ಐದು ಸಣ್ಣ ಗಾತ್ರದ ಅಂಗಣಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ನಿತ್ಯ ಪಂದ್ಯಗಳು ನಡೆಯುತ್ತವೆ. ಇದು ಅರ್ಜೆಂಟೀನಾದ ಕಾಲ್ಚಳಕದ ಮೋಡಿಗಾರರ ಫುಟ್‌ಬಾಲ್‌ ಪ್ರೀತಿಗೆ ಸಾಕ್ಷಿ.v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.