ADVERTISEMENT

ಚೆಸ್‌ ಒಲಿಂಪಿಯಾಡ್‌: ಭಾರತ ಮಹಿಳಾ ತಂಡಕ್ಕೆ ಜಯ

ಚೆಸ್‌ ಒಲಿಂಪಿಯಾಡ್‌; ಹಂಪಿ, ವೈಶಾಲಿ ಚಾಣಾಕ್ಷ ಆಟ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 6:03 IST
Last Updated 4 ಆಗಸ್ಟ್ 2022, 6:03 IST
ಕೊನೇರು ಹಂಪಿ
ಕೊನೇರು ಹಂಪಿ   

ಮಹಾಬಲಿಪುರಂ: ಕೊನೇರು ಹಂಪಿ ಮತ್ತು ಆರ್‌.ವೈಶಾಲಿ ಅವರ ಚುರುಕಿನ ಆಟದ ನೆರವಿನಿಂದ ಭಾರತ ಮಹಿಳಾ ‘ಎ’ ತಂಡದವರು ಚೆಸ್‌ ಒಲಿಂಪಿಯಾಡ್‌ನಲ್ಲಿ ಜಯ ಸಾಧಿಸಿದರು.

ಬುಧವಾರ ನಡೆದ ಆರನೇ ಸುತ್ತಿನಲ್ಲಿ ಭಾರತ 3–1 ರಲ್ಲಿ ಜಾರ್ಜಿಯ ಎದುರು ಗೆದ್ದಿತು. ಹಂಪಿ ಅವರು 42 ನಡೆಗಳಲ್ಲಿ ನನಾ ಡಿಜಾಗ್ನಿಜೆ ಅವರನ್ನು ಮಣಿಸಿದರೆ, ವೈಶಾಲಿ ಅವರು ಲೆಲಾ ಜವಾಕ್‌ಶ್ವಿಲಿ ಎದುರು ಗೆದ್ದರು. ತಾನಿಯಾ ಸಚ್‌ದೇವ್‌–ಸಲೋಮ್ ಮೆಲಿಯಾ ಮತ್ತು ಡಿ.ಹರಿಕಾ– ನಿನೊ ಬಾಟ್‌ಸಿಯಾಶ್ವಿಲಿ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಮಹಿಳೆಯರ ವಿಭಾಗದಲ್ಲಿ ಭಾರತ ‘ಬಿ’ ತಂಡ 2–2 ರಲ್ಲಿ ಜೆಕ್‌ ಗಣರಾಜ್ಯದ ಜತೆ ಡ್ರಾ ಮಾಡಿಕೊಂಡಿತು. ವಂತಿಕಾ ಅಗರವಾಲ್, ಪದ್ಮಿನಿ ರಾವತ್‌, ಮೇರಿ ಆ್ಯನ್‌ಗೋಮ್ಸ್‌ ಮತ್ತು ದಿವ್ಯಾ ದೇಶಮುಖ್‌ ಅವರು ಎದುರಾಳಿಗಳ ಜತೆ ಪಾಯಿಂಟ್‌ ಹಂಚಿಕೊಂಡರು. ಭಾರತ ‘ಸಿ’ ತಂಡ 3–1 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿತು.

ADVERTISEMENT

ಮುಕ್ತ ವಿಭಾಗದಲ್ಲಿ ಭಾರತ ‘ಎ’ ತಂಡ ಉಜ್ಬೆಕಿಸ್ತಾನ ಜತೆ 2–2 ರಲ್ಲಿ ಡ್ರಾ ಮಾಡಿಕೊಂಡಿತು. ಪಿ.ಹರಿಕೃಷ್ಣ ಅವರು ಅಬ್ದುಸತ್ತಾರೊವ್ ನಾದಿರ್ಬೆಕ್ ಎದುರು ಗೆದ್ದರೆ, ಕೆ.ಶಶಿಕಿರಣ್ ಅವರು ವಖಿದೊವ್ ಶಂಸಿದ್ದೀನ್ ಕೈಯಲ್ಲಿ ಪರಾಭವಗೊಂಡರು. ವಿದಿತ್‌ ಸಂತೋಷ್‌ ಗುಜರಾತಿ– ಯಾಕುಬೊವ್ ನಾದಿರ್ಬೆಕ್, ಅರ್ಜುನ್‌ ಎರಿಗೈಸಿ– ಸಿಂದರೊವ್ ಜವೊಖಿರ್‌ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡವು.

ಪ್ರಭಾವಿ ಆಟವಾಡಿದ ‘ಸಿ’ ತಂಡದವರು 3.5–0.5 ರಿಂದ ಲಿಥುವೇನಿಯ ವಿರುದ್ಧ ಗೆದ್ದು ಅಚ್ಚರಿಯ ಫಲಿತಾಂಶ ನೀಡಿದರು.

ಎಸ್‌.ಪಿ.ಸೇತುರಾಮನ್, ಅಭಿಜಿತ್‌ ಗುಪ್ತಾ ಮತ್ತು ಅಭಿಮನ್ಯು ಪುರಾಣಿಕ್‌ ಅವರು ತಮ್ಮ ಎದುರಾಳಿಗಳನ್ನು ಮಣಿಸಿದರೆ, ಸೂರ್ಯಶೇಖರ್‌ ಗಂಗೂಲಿ– ಟೈಟಸ್ ಸ್ಟ್ರೆಮವಿಸಿಯಸ್‌ ಡ್ರಾ ಮಾಡಿಕೊಂಡರು.

ಮುಕ್ತ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಅಮೆರಿಕ 2.5–1.5 ಪಾಯಿಂಟ್‌ಗಳಿಂದ ಇರಾನ್ ವಿರುದ್ಧ ಜಯಿಸಿತು. ಫ್ಯಾಬಿಯಾನೊ ಕರುವಾನಾ ಅವರು ಪರ್ಹಾಮ್‌ ಮಗ್ಸೂದ್‌ಲು ಎದುರು ಗೆದ್ದರು. ಇತರು ಮೂರು ಪಂದ್ಯಗಳ ಡ್ರಾದಲ್ಲಿ ಕೊನೆಗೊಂಡವು.

ನಾಲ್ಕನೇ ಶ್ರೇಯಾಂಕ ಹೊಂದಿರುವ ಸ್ಪೇನ್‌ ತಂಡ ಕ್ಯೂಬಾ ಜತೆ 2–2 ರಲ್ಲಿ ಡ್ರಾ ಸಾಧಿಸಿತು. ಆಸ್ಟ್ರೇಲಿಯಾ ತಂಡವು ಮ್ಯಾಗ್ನಸ್‌ ಕಾರ್ಲ್‌ಸನ್‌ ನೇತೃತ್ವದ ನಾರ್ವೆ ಎದುರು 2.5–1.5 ಪಾಯಿಂಟ್‌ಗಳಿಂದ ಗೆದ್ದಿತು.

‘ಬಿ’ ತಂಡಕ್ಕೆ ಮೊದಲ ಸೋಲು

ಯುವ ಆಟಗಾರರನ್ನು ಒಳಗೊಂಡ ಭಾರತ ‘ಬಿ’ ತಂಡದ ಸತತ ಐದು ಪಂದ್ಯಗಳ ಗೆಲುವಿನ ಓಟಕ್ಕೆ ತೆರೆಬಿದ್ದಿದೆ. ಬುಧವಾರ ನಡೆದ ಮುಕ್ತ ವಿಭಾಗದ ಆರನೇ ಸುತ್ತಿನಲ್ಲಿ ಅರ್ಮೇನಿಯ 2.5–1.5 ಪಾಯಿಂಟ್‌ಗಳಿಂದ ಭಾರತ ತಂಡವನ್ನು ಮಣಿಸಿತು.

ಡಿ.ಗುಕೇಶ್‌ ಅವರು ಗ್ಯಾಬ್ರಿಯೆಲ್ ಸರ್ಗಿಸಿಯಾನ್‌ ವಿರುದ್ಧ ಗೆದ್ದು ಪೂರ್ಣ ಪಾಯಿಂಟ್‌ ತಂದುಕೊಟ್ಟರು. ಇದು ಟೂರ್ನಿಯಲ್ಲಿ ಅವರಿಗೆ ದೊರೆತ ಸತತ ಆರನೇ ಗೆಲುವು. ಆದರೆ ಬಿ.ಅಧಿಬನ್‌ ಮತ್ತು ರೌನಕ್‌ ಸಾಧ್ವಾನಿ ಕ್ರಮವಾಗಿ ಸ್ಯಾಮ್ವೆಲ್ ಸಹಕ್ಯಾನ್‌ ಹಾಗೂ ರಾಬರ್ಟ್‌ ಹೊವ್‌ನಿಸಿನ್‌ ಎದುರು ಪರಾಭವಗೊಂಡರು. ನಿಹಾಲ್‌ ಸರಿನ್– ಹ್ರಾಂಟ್ ಮೆಕುಮ್ಯಾನ್ ನಡುವಿನ ಪಂದ್ಯ ಡ್ರಾ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.