ADVERTISEMENT

ಪದಕ ಗೆಲ್ಲಲೇಬೇಕೆಂದು ಆ ಕ್ಷಣ ನಿರ್ಧರಿಸಿದೆ: ಕಂಚು ಗೆದ್ದ ಬಜರಂಗ್‌ ಪೂನಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2021, 12:41 IST
Last Updated 8 ಆಗಸ್ಟ್ 2021, 12:41 IST
   

ನವದೆಹಲಿ: ‘ಸೆಮಿಫೈನಲ್‌ನ ಸೋಲಿನಿಂದ ತೀವ್ರ ಬೇಸರದಲ್ಲಿದ್ದ ನಾನು, ಅದರ ಬಗ್ಗೆ ಚಿಂತಿಸುವುದರಲ್ಲಿ ಫಲವಿಲ್ಲ ಎಂದು ಅರಿತು ಪದಕ ಗೆದ್ದೆ,’ ಎಂದು ಒಲಿಂಪಿಕ್ಸ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಬಜರಂಗ ಪೂನಿಯಾ ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯ ಕಂಚಿನ ಪದಕಕ್ಕಾಗಿನ ಹೋರಾಟದಲ್ಲಿ ಭಾರತದ ಪೈಲ್ವಾನ ಬಜರಂಗ್ ಪೂನಿಯಾ, ಕಜಕಿಸ್ತಾನದ ದೌಲತ್ ನಿಯಾಜ್‌ಬೆಕೋವ್ ವಿರುದ್ಧ 8-0ರಿಂದ ಗೆಲುವು ದಾಖಲಿಸಿದರು

ಇದಕ್ಕೂ ಮೊದಲು ಅವರು, ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ, ಮೂರು ಬಾರಿಯ ವಿಶ್ವ ಚಾಂಪಿಯನ್ ಅಜರ್‌ ಬೈಜಾನ್‌ನ ಹಾಜಿ ಅಲಿಯೇವ್ ವಿರುದ್ಧ 5-12ರ ಅಂತರದಲ್ಲಿ ಸೋಲು ಅನುಭವಿಸಿದ್ದರು.

ADVERTISEMENT

ಒಲಿಂಪಿಕ್ಸ್‌ನಲ್ಲಿ ತಮ್ಮನ್ನು ಕಾಡಿದ ಸೋಲು ಮತ್ತು ಗೆಲ್ಲಲೇಬೇಕು ಎಂಬ ಛಲದ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಬಜರಂಗ್‌ ಪೂನಿಯಾ ಮಾತನಾಡಿದ್ದಾರೆ.

‘ಸೆಮಿಫೈನಲ್‌ನಲ್ಲಿ ಸೋತ ನಾನು ಮಾತನಾಡುವ ಮನಸ್ಥಿತಿಯಲ್ಲೇ ಇರಲಿಲ್ಲ. ಪಂದ್ಯದ ಸೋಲಿನ ನಂತರ ಒಬ್ಬ ಅಥ್ಲಿಟ್‌ಗೆ ಆಗುವ ನೋವಿಗಿಂತಲೂ ದೊಡ್ಡ ನೋವನ್ನು ಯಾರೂ ಅನುಭವಿಸಲಾರರು. ಅಂದು ರಾತ್ರಿ ನಾನು ಹೆಚ್ಚೆಂದರೆ 2–3 ಗಂಟೆ ಮಾತ್ರವೇ ನಿದ್ರಿಸಿರಬಹುದು. ಆದರೆ, ನಾನು ಮತ್ತೆ ಮುಂದೆ ಸಾಗಲು ತೀರ್ಮಾನಿಸಿದೆ. ಪದಕ ಗೆಲ್ಲಲು ನಿರ್ಧರಿಸಿದೆ. ಸೆಮಿಫೈನಲ್‌ನ ಸೋಲಿನ ಬಗ್ಗೆ ಚಿಂತಿಸಿ ಫಲವಿಲ್ಲ ಎಂದು ನಾನು ಅಂದುಕೊಂಡೆ,‘ ಎಂದು ಬಜರಂಗ್‌ ಪೂನಿಯಾ ಹೇಳಿದ್ದಾರೆ.

ಅಂತಿಮವಾಗಿ ಅವರು ಮೂರನೇ ಸ್ಥಾನದ ಪೈಪೋಟಿಯಲ್ಲಿ ಕಂಚು ಗೆಲ್ಲುವಲ್ಲಿ ಸಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.