ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆ ಅಥ್ಲೀಟುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಬಂದಿರುವ ವರದಿಗಳನ್ನು ಬಾಕ್ಸಿಂಗ್ ದಿಗ್ಗಜರಾದ ಮೇರಿ ಕೋಮ್ ಅವರು ನಿರಾಕರಿಸಿದ್ದಾರೆ. ತಮ್ಮ ಅವಧಿಯನ್ನು ಪೂರ್ಣಗೊಳಿಸುವುದಾಗಿಯೂ ಅವರು ಹೇಳಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಳೆದ ವಾರ ನಡೆದ ರಾಷ್ಟ್ರೀಯ ಕ್ರೀಡೆಗಳ ಸಮಾರೋಪ ಸಮಾರಂಭದ ವೇಳೆ ತಮ್ಮನ್ನು ‘ಕೆಳ ದರ್ಜೆಯ’ ಹೋಟೆಲ್‌ನಲ್ಲಿ ಉಳಿಸಿಕೊಳ್ಳಲಾಗಿತ್ತು ಎಂದು 42 ವರ್ಷ ವಯಸ್ಸಿನ ಮೇರಿ ಕೋಮ್ ಅತೃಪ್ತಿ ತೋಡಿಕೊಂಡಿದ್ದರು.
‘ಖಾಸಗಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ತಮ್ಮ ಅಸಮಾಧಾನವನ್ನು ತಪ್ಪಾಗಿ ಅರ್ಥೈಸಲಾಗಿದ್ದು, ತಾವು ರಾಜೀನಾಮೆ ನೀಡಿರುವುದಾಗಿ ಮಾಧ್ಯಮಗಳಿಗೆ ವರದಿ ಸೋರಿಕೆ ಮಾಡಲಾಯಿತು. ಆದರೆ ನಾನು ರಾಜೀನಾಮೆ ನೀಡಿಲ್ಲ. ನಾನು ಅವಧಿ ಪೂರೈಸುತ್ತೇನೆ’ ಎಂದು 2012ರ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಹೇಳಿದ್ದಾರೆ. 2026ರಲ್ಲಿ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಗಿಯಲಿದೆ.
‘ಇದೇ ರೀತಿಯಲ್ಲಿ ನಮ್ಮನ್ನು ಕಡೆಗಣಿಸಿದರೆ ನಾನು ರಾಜೀನಾಮೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದಷ್ಟೇ ನನ್ನ ಜೊತೆಯಿದ್ದವರಿಗೆ (ಅಥ್ಲೀಟುಗಳ ಆಯೋಗ) ತಿಳಿಸಿದ್ದೆ. ನಾನು ರಾಜೀನಾಮೆ ನೀಡಿರುವುದಾಗಿ ಹೇಳಿಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.