ADVERTISEMENT

ಕಬಡ್ಡಿ ಆಡದಿದ್ದರೆ ನಟನಾಗುತ್ತಿದ್ದರಂತೆ ರೋಹಿತ್!

ಬಸವರಾಜ ದಳವಾಯಿ
Published 27 ಜುಲೈ 2020, 19:31 IST
Last Updated 27 ಜುಲೈ 2020, 19:31 IST
ರೈಡಿಂಗ್‌ ವೇಳೆ ರೋಹಿತ್ ಕುಮಾರ್ ಕಪ್ಪೆ ಜಿಗಿತ
ರೈಡಿಂಗ್‌ ವೇಳೆ ರೋಹಿತ್ ಕುಮಾರ್ ಕಪ್ಪೆ ಜಿಗಿತ   
""

ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡುವ ಬೆಂಗಳೂರು ಬುಲ್ಸ್‌ ತಂಡದ ನಾಯಕ ರೋಹಿತ್‌ ಕುಮಾರ್‌ ದೇಶದ ಪ್ರತಿಭಾನ್ವಿತ ರೈಡರ್‌ಗಳಲ್ಲಿ ಒಬ್ಬರು. ಫ್ರಾಗ್‌ಜಂಪ್‌ ಅವರ ಟ್ರೇಡ್‌ಮಾರ್ಕ್‌. 2017ರಿಂದ ಬುಲ್ಸ್‌ ತಂಡದಲ್ಲಿರುವ ರೋಹಿತ್‌ ಕಬಡ್ಡಿ ಆಟಗಾರನಾಗಿಲ್ಲದೇ ಹೋಗಿದ್ದರೆ? ಉತ್ತರ.... ಅವರು ಚಿತ್ರನಟನಾಗಲು ಪ್ರಯತ್ನಿಸುತ್ತಿದ್ದರಂತೆ.

ರೋಹಿತ್‌ ಕುಮಾರ್‌– ಪ್ರಜಾವಾಣಿ ಚಿತ್ರ

ಹೀಗೆಂದು ಅವರೇ ಹೇಳಿದ್ದಾರೆ. 2018ರಲ್ಲಿ ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಪ್ರಶಸ್ತಿ ಎತ್ತಿದಾಗ ನಾಯಕರಾಗಿದ್ದ ರೋಹಿತ್‌ ತಮ್ಮ ಈ ಮನದಾಳವನ್ನು ವಿವೊ ಪ್ರೊ ಕಬಡ್ಡಿ ಇನ್‌ಸ್ಟಾಗ್ರಾಂ ನೇರ ಸಂವಾದ ಕಾರ್ಯಕ್ರಮ ‘ಬಿಯಾಂಡ್‌ ದ ಮ್ಯಾಟ್‌’ನಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಅವರು ಅಕ್ಷಯ್‌ ಕುಮಾರ್‌ ಅವರ ದೊಡ್ಡ ಫ್ಯಾನ್‌. ಅವರ ಆ್ಯಕ್ಷನ್‌, ಸ್ಟಂಟ್‌ಗಳೆಲ್ಲ ರೋಹಿತ್‌ಗೆ ಅಚ್ಚುಮೆಚ್ಚು.

‘ಬಾಲ್ಯದಲ್ಲಿ ನನಗೆ ಯಾವುದೇ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ. ನನ್ನೂರಿನಲ್ಲಿ ಕಬಡ್ಡಿ ಆಡುವವರನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ರಾಕೇಶ್‌ ಕುಮಾರ್‌ (ಭಾರತ ಕಬಡ್ಡಿ ತಂಡದ ಉಪನಾಯಕ ಆಗಿದ್ದರು) ಮತ್ತಿತರರ ಆಟ ನನ್ನಲ್ಲಿ ಸ್ಫೂರ್ತಿ ತುಂಬಿತು. ನನ್ನ ತಂದೆ ಕೂಡ ಕೆಲ ಕಾಲ ಕಬಡ್ಡಿ ಆಡಿದ್ದರು. ಬಳಿಕ ಅವರು ದೆಹಲಿ ಪೊಲೀಸ್‌ ಸೇವೆಗೆ ಸೇರಿದರು. ನಾನು ಕಬಡ್ಡಿ ಆಟಗಾರನಾಗಬೇಕೆಂಬುದು ಅವರ ಹಂಬಲವಾಗಿತ್ತು. ಅದಕ್ಕಾಗಿ ರಾಕೇಶ್‌ಕುಮಾರ್‌ ಹಾಗೂ ಮನ್‌ಜೀತ್‌ ಚಿಲ್ಲಾರ್‌ ಅವರು ಕಣದಲ್ಲಿರುತ್ತಿದ್ದ ಪಂದ್ಯಗಳನ್ನು ವೀಕ್ಷಿಸಲು ಕರೆದೊಯ್ಯುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ADVERTISEMENT

‘ಹೀಗೆ ನನ್ನ ಕಬಡ್ಡಿ ಪಯಣ ಆರಂಭವಾಗಿತ್ತು. ಆದರೆ ಇದು ನಿರಂತರ ಪ್ರಕ್ರಿಯೆಯಾಗಿರಲಿಲ್ಲ. ಕ್ರೀಡೆಗಳನ್ನು ಬದಲಾಯಿಸತೊಡಗಿದೆ. ಅಥ್ಲೆಟಿಕ್ಸ್‌ನತ್ತ ಆಸಕ್ತಿ ಹೊರಳಿತು. ವೈಯಕ್ತಿಕ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಇಷ್ಟಪಡತೊಡಗಿದೆ. 100 ಹಾಗೂ 200 ಮೀಟರ್ ಓಟ, ಲಾಂಗ್‌ ಜಂಪ್‌ ಹಾಗೂ ಹೈ ಜಂಪ್‌ಗಳಲ್ಲಿ ನನ್ನ ಸಾಮರ್ಥ್ಯ ಚೆನ್ನಾಗಿತ್ತು’ ಎನ್ನುತ್ತಾರೆ.

’ಕಬಡ್ಡಿ ಬಗ್ಗೆ ಹೆಚ್ಚು ತಿಳಿದುಕೊಂಡೆ. ನನ್ನ ತಂದೆ ಕೂಡ ಇದೇ ಕ್ರೀಡೆಯಲ್ಲೇ ಬದುಕು ಕಟ್ಟಿಕೊಳ್ಳಲು ಹುರಿದುಂಬಿಸಿದರು. ಹಂತಹಂತವಾಗಿ ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿದೆ. ಕ್ರೀಡೆಯನ್ನು ಆಸ್ವಾದಿಸತೊಡಗಿದೆ. ಮೊದಲ ಬಾರಿ ಕಿಟ್‌ ಪಡೆದಾಗ ನನ್ನಲ್ಲಿ ಉಂಟಾದ ಪುಳಕ ಅಷ್ಟಿಷ್ಟಲ್ಲ. ದೆಹಲಿ ತಂಡದ ತರಬೇತಿ ಸಂದರ್ಭದಲ್ಲಿ ಕಣಕ್ಕಿಳಿದಾಗ ಭಾರತ ತಂಡವನ್ನೂ ಪ್ರತಿನಿಧಿಸುವ ಆಸೆ ಮೊಳಕೆಯೊಡೆಯಿತು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾದೆ‘ ಎಂದರು ರೋಹಿತ್‌.

‍ಪ್ರೊ ಕಬಡ್ಡಿಗೆ ಮೂರನೇ ಆವೃತ್ತಿಯಲ್ಲಿ ಪದಾರ್ಪಣೆ ಮಾಡಿದ ರೋಹಿತ್‌ ಕುಮಾರ್‌, ಶೀಘ್ರವೇ ಶ್ರೇಷ್ಠ ರೈಡರ್‌ಗಳಲ್ಲಿ ಒಬ್ಬರಾಗಿ ರೂಪುಗೊಂಡರು. ಮೊದಲ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡದ ಪರ ಆಡಿದ್ದ ಅವರು, ಅತಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಆ ಋತುವಿನಲ್ಲಿ ಪಾಟ್ನಾ ಚಾಂಪಿಯನ್‌ ಕೂಡ ಆಗಿತ್ತು. ಬೆಂಗಳೂರು ತಂಡಕ್ಕೆ ಸೇರಿಕೊಂಡಿದ್ದು 2017ರಲ್ಲಿ.

2016ರಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿಭಾರತ ತಂಡ ಚಿನ್ನದ ಪದಕ ಗೆದ್ದಿತ್ತು. ರೋಹಿತ್‌ ಆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.