
ಮ್ಯಾಗ್ನಸ್ ಕಾರ್ಲಸನ್, ಡಿ.ಗುಕೇಶ್
(ಚಿತ್ರ ಕೃಪೆ: X/@ChessbaseIndia)
ಜಾಗ್ರೆಬ್ (ಕ್ರೊವೇಶಿಯಾ): ವಿಶ್ವ ಚಾಂಪಿಯನ್ ಭಾರತದ ಡಿ. ಗುಕೇಶ್ ವಿರುದ್ಧ ಎದುರಾದ ಸತತ ಎರಡನೇ ಸೋಲಿನ ಬಳಿಕ ಚೆಸ್ ಅನ್ನು ಆನಂದಿಸುತ್ತಿಲ್ಲ ಎಂದು ವಿಶ್ವದ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಹೇಳಿದ್ದಾರೆ.
ನಾರ್ವೆ ಚೆಸ್ ಟೂರ್ನಿಯ ಬೆನ್ನಲ್ಲೇ ಕ್ರೊವೇಶಿಯಾದಲ್ಲಿ ನಡೆಯುತ್ತಿರುವ ಸೂಪರ್ ಯುನೈಟೆಡ್ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯಲ್ಲೂ 19ರ ಹರೆಯದ ಗುಕೇಶ್ ವಿರುದ್ಧ ಕಾರ್ಲಸನ್ ಮುಗ್ಗರಿಸಿದ್ದರು.
ಪಂದ್ಯಕ್ಕೂ ಮುನ್ನ ಗುಕೇಶ್ ಅವರನ್ನು 'ದುರ್ಬಲ' ಆಟಗಾರ ಎಂದು ಕಾರ್ಲಸನ್ ಹಗುರವಾಗಿ ಪರಿಗಣಿಸಿದ್ದರು. ಆದರೆ ಗುಕೇಶ್ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದ್ದಾರೆ.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನೀಗ ಚೆಸ್ ಆಡುವುದನ್ನು ಆನಂದಿಸುತ್ತಿಲ್ಲ. ಆಟದ ಪ್ರಕ್ರಿಯೆಯನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ನಾನು ನಿರಂತರವಾಗಿ ಹಿಂಜರಿಯುತ್ತಿದ್ದೇನೆ. ನನ್ನ ಆಟವೂ ನಿಜಕ್ಕೂ ಕಳಪೆಯಾಗಿದೆ' ಎಂದು ಕಾರ್ಲಸನ್ ಹೇಳಿದ್ದಾರೆ.
ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿರುವ ಗುಕೇಶ್ ಆರನೇ ಸುತ್ತಿನ ಬಳಿಕ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
'ಈ ಮಾದರಿಯಲ್ಲಿ ಗುಕೇಶ್ ನಿಜಕ್ಕೂ ಅದ್ಭುತ ಆಟ ಆಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಶ್ರೇಯ ಸಲ್ಲಬೇಕು' ಎಂದು ಕಾರ್ಲಸನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.