ADVERTISEMENT

Gukesh D: ವಿಶ್ವ ವಿಜಯದ ಗುಟ್ಟು ಬಿಚ್ಚಿಟ್ಟ ಗುಕೇಶ್

ಪಿಟಿಐ
Published 16 ಡಿಸೆಂಬರ್ 2024, 13:32 IST
Last Updated 16 ಡಿಸೆಂಬರ್ 2024, 13:32 IST
<div class="paragraphs"><p>ಚೆನ್ನೈ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ತೆರಳಿದ ಡಿ. ಗುಕೇಶ್ ಅಭಿಮಾನಿಗಳತ್ತ ಕೈ ಬೀಸಿದರು&nbsp; </p></div>

ಚೆನ್ನೈ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ತೆರಳಿದ ಡಿ. ಗುಕೇಶ್ ಅಭಿಮಾನಿಗಳತ್ತ ಕೈ ಬೀಸಿದರು 

   

 –ಪಿಟಿಐ ಚಿತ್ರ

ಚೆನ್ನೈ: ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಅವರು ತಾವು ಅತ್ಯುನ್ನತ ಸಾಧನೆ ಮಾಡಲು ‘ಭಾವನಾತ್ಮಕ ಒತ್ತಡ’ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಿದ್ದು ಕಾರಣ. ಆ ರೀತಿಯ ನಿರ್ವಹಣೆಯನ್ನು ಕಲಿಸಿದ ಮೆಂಟಲ್ ಕಂಡಿಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರಿಗೆ ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ. 

ADVERTISEMENT

18 ವರ್ಷದ ಗುಕೇಶ್ ಅವರು ಈಚೆಗೆ ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೇನ್ ವಿರುದ್ಧ ಗೆದ್ದು ದಾಖಲೆ ಬರೆದರು. 

ಸೋಮವಾರ ಸಿಂಗಪುರದಿಂದ ತಮ್ಮ ತವರು ಚೆನ್ನೈಗೆ ಮರಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅವರು ಓದಿದ ವೇಲಮ್ಮಾಳ ವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.  

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬರೀ ಚೆಸ್ ಕೌಶಲಗಳಷ್ಟೇ ಅಲ್ಲ. ಅದರಲ್ಲಿ ಬಹಳಷ್ಟು ಮಾನಸಿಕ ಮತ್ತು ಭಾವನಾತ್ಮಕವಾದ ಒತ್ತಡಗಳೂ ಇರುತ್ತವೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಪ್ಯಾಡಿ (ಆಪ್ಟನ್) ಅವರು ನೀಡಿದ ಮಾರ್ಗದರ್ಶನದಿಂದ ನನಗೆ ಬಹಳಷ್ಟು ನೆರವಾಯಿತು’ ಎಂದು ವಿವರಿಸಿದರು. 

ಪ್ಯಾಡಿ ಹೆಸರಾಂತ ಮೆಂಟಲ್ ಕೋಚ್ ಆಗಿದ್ದು, ಫೈನಲ್‌ಗೂ ಮುನ್ನ ಮತ್ತು  ಅಂತಿಮ 14 ಸುತ್ತುಗಳ ಸಂದರ್ಭದಲ್ಲಿ ಅವರು ಗುಕೇಶ್ ಅವರಿಗೆ ಮಾರ್ಗದರ್ಶನ ನೀಡಿದ್ದರು. 

‘ಪ್ಯಾಡಿಯೊಂದಿಗೆ ಮಾತುಕತೆ ಮತ್ತು ಅವರ ಸಲಹೆಗಳು ಬಹಳ ಮುಖ್ಯವಾಗಿವೆ. ಒಬ್ಬ ಆಟಗಾರನಾಗಿ ಸುಧಾರಣೆಗೊಳ್ಳಲು ಅವರ ಸಲಹೆಗಳು ಉತ್ತಮವಾಗಿವೆ’ ಎಂದು ಗುಕೇಶ್ ಹೇಳಿದರು. 

‘ನನ್ನ ತಂಡದಲ್ಲಿ ಪ್ಯಾಡಿ ಬಹಳ ಪ್ರಮುಖ ಸದಸ್ಯ. ಕ್ಯಾಂಡಿಡೇಟ್ಸ್‌ನಲ್ಲಿ ಗೆದ್ದ (ಏಪ್ರಿಲ್‌ನಲ್ಲಿ) ನಂತರ ಸಂದೀಪ್ ಸರ್ (ವೆಸ್ಟ್‌ಬ್ರಿಜ್ ಕ್ಯಾಪಿಟಲ್‌ನ ಸಂದೀಪ್ ಸಿಂಘಾಲ್) ಅವರಿಗೆ ಮೆಂಟಲ್ ಟ್ರೇನರ್ ಬೇಕು ಎಂದು ಕೇಳಿದೆ. ಆಗ ಅವರು ಕೂಡಲೇ ಪ್ಯಾಡಿಯನ್ನು ಪರಿಚಯಿಸಿದರು. ಅಂತರರಾಷ್ಟ್ರೀಯ ಅಥ್ಲೀಟ್‌ಗಳೊಂದಿಗೆ ಕಾರ್ಯನಿರ್ವಹಿಸಿದ ಅಪಾರ ಅನುಭವ ಪ್ಯಾಡಿಗೆ ಇದೆ’ ಎಂದು ಗುಕೇಶ್ ನೆನಪಿಸಿಕೊಂಡರು.

ಈಚೆಗೆ ಗುಕೇಶ್ ಅವರು ವಿಶ್ವ ಚಾಂಪಿಯನ್‌ಷಿಪ್ ಪಟ್ಟಕ್ಕೇರಿದಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಪ್ಯಾಡಿ, ‘ಹದಿಹರೆಯದ ಗುಕೇಶ್ ಅವರಿಗೆ ಆತ್ಮಪ್ರಜ್ಞೆ ಉತ್ತಮವಾಗಿದೆ. ತಮ್ಮ ಸಾಮರ್ಥ್ಯವನ್ನು ಚೆನ್ನಾಗಿ ಅರಿತಿದ್ದಾರೆ. ಅವರ ಗೆಲುವಿಗೆ ಅದೇ ಕಾರಣ. ತಮ್ಮ ಯೋಚನೆಗಳು ಮತ್ತು ಒತ್ತಡಗಳನ್ನು ನಿರ್ವಹಿಸುವುದು ಚೆನ್ನಾಗಿ ಕಲಿತುಕೊಂಡಿದ್ದಾರೆ. ತಮ್ಮನ್ನು ತಾವು ನಿರ್ವಹಿಸುವ ಕಲೆ ಅವರಿಗಿದೆ. ಆದ್ದರಿಂದಲೇ ಅವರು ವಿಶ್ವ ಚಾಂಪಿಯನ್’ ಎಂದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.