ನವದೆಹಲಿ: ನ್ಯೂಟ್ರಿಷನ್ ಹಾಗೂ ಫಿಟ್‌ನೆಸ್ ಅಗತ್ಯಗಳಿಗಾಗಿ ತಾನು ಲಂಡನ್‌ನಲ್ಲಿದ್ದು, ತನ್ನ ಕುಟುಂಬ ಹಾಗೂ ತರಬೇತುದಾರರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸ್ಪಷ್ಟಪಡಿಸಿದ್ದಾರೆ.
ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ಕಳೆದ 10 ದಿನಗಳಿಂದ ಲಂಡನ್‌ನಲ್ಲಿದ್ದಾರೆ. ಈ ಕುರಿತು ಅವರು ಗ್ಯಾಟೊರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಯ (ಜಿಎಸ್‌ಎಸ್‌ಐ) ನ್ಯೂಟ್ರಿಷನಿಸ್ಟ್ ರೆಬೆಕ್ಕಾ ರ‍್ಯಾಂಡೆಲ್ ಅವರೊಂದಿಗೆ ಇರುವ ಚಿತ್ರವನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬ, ರಾಷ್ಟ್ರೀಯ ಶಿಬಿರ, ಕೋಚ್‌ನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ದೇಶವನ್ನು ತೊರೆದಿದ್ದಾರೆ ಎಂಬ ವದಂತಿಗಳನ್ನು ಸಿಂಧು ಅಲ್ಲಗಳೆದಿದ್ದಾರೆ.
‘ನ್ಯೂಟ್ರಿಷನ್ ಅಗತ್ಯಗಳಿಗಾಗಿ ನಾನು ಕೆಲವು ದಿನಗಳ ಹಿಂದೆ ಲಂಡನ್‌ಗೆ ಬಂದಿದ್ದೇನೆ. ಇದಕ್ಕೆ ನನ್ನ ಪೋಷಕರ ಒಪ್ಪಿಗೆಯೂ ಇದೆ. ಕುಟುಂಬದಲ್ಲಿ ಬಿರುಕು ಮೂಡಿಲ್ಲ‘ ಎಂದು ಮಂಗಳವಾರ ಟ್ವೀಟರ್‌ನಲ್ಲಿ ಸಿಂಧು ಬರೆದುಕೊಂಡಿದ್ದಾರೆ.
‘ಹೈದರಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಸಮರ್ಪಕ ತರಬೇತಿ ಸಿಗುತ್ತಿಲ್ಲ. ಹೀಗಾಗಿ ಸಿಂಧು ಲಂಡನ್‌ಗೆ ತೆರಳಿದ್ದಾರೆ‘ ಎಂದು ತಂದೆ ಪಿ.ವಿ.ರಮಣ ಹೇಳಿದ್ದರು. ಈ ಹೇಳಿಕೆಗೆ ಸಿಂಧು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
‘ಹೈದರಾಬಾದ್ ಶಿಬಿರದಲ್ಲಿ ಸಿಂಧುಗೆ ಸೂಕ್ತ ತರಬೇತಿ ದೊರೆಯುತ್ತಿಲ್ಲ. 2018ರ ಏಷ್ಯನ್ ಕ್ರೀಡಾಕೂಟಗಳ ಬಳಿಕ ಗೋಪಿ (ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್) ಅವರು ಸಿಂಧು ಅಭ್ಯಾಸದ ಕಡೆಗೆ ಆಸಕ್ತಿ ವಹಿಸುತ್ತಿಲ್ಲ. ತರಬೇತಿಗಾಗಿ ಸೂಕ್ತ ತರಬೇತುದಾರರನ್ನು ನಿಯೋಜಿಸುತ್ತಿಲ್ಲ‘ ಎಂದು ರಮಣ ಆರೋಪಿಸಿದ್ದರು.
ರಮಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಗೋಪಿಚಂದ್ ನಿರಾಕರಿಸಿದ್ದಾರೆ.
‘ಸಿಂಧು ಅವರ ತಂದೆಯ ಹೇಳಿಕೆಗೆ ನಾನು ಪ್ರತಿಕ್ರಿಯಿಸಲಾರೆ. ಈ ಕುರಿತು ಸ್ವತಃ ಸಿಂಧು ಮಾತನಾಡಿದರೆ ನಾನು ಉತ್ತರಿಸುತ್ತೇನೆ‘ ಎಂದಿದ್ದಾರೆ.
‘ಕೋಚ್ ಗೋಪಿಚಂದ್ ಹಾಗೂ ರಾಷ್ಟ್ರೀಯ ಶಿಬಿರದಲ್ಲಿರುವ ಸೌಲಭ್ಯಗಳ ಬಗ್ಗೆ ನನಗೆ ತಕರಾರಿಲ್ಲ‘ ಎಂದು ಸಿಂಧು ಹೇಳಿದ್ದಾರೆ.
2021ರ ಜನವರಿಯಲ್ಲಿ ನಿಗದಿಯಾಗಿರುವ ಏಷ್ಯನ್ ಲೆಗ್ ಬ್ಯಾಡ್ಮಿಂಟನ್ ಟೂರ್ನಿಗೆ ಸಿಂಧು ಸಜ್ಜಾಗುತ್ತಿದ್ದಾರೆ.
ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ವಿಶ್ವ ಟೂರ್ ಫೈನಲ್ಸ್ ಅನ್ನು ಜನವರಿ 27ಕ್ಕೆ ಹಾಗೂ ಎರಡು ಏಷ್ಯನ್ ಓಪನ್ ಟೂರ್ನಿಗಳನ್ನು ಜನವರಿ (12–17 ಹಾಗೂ 19–24) ಮುಂದೂಡಿತ್ತು. ಏಷ್ಯನ್ ಓಪನ್ ಟೂರ್ನಿಗಳು ಬ್ಯಾಂಕಾಕ್‌ನಲ್ಲಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.