ಈಂಡ್‌ಹೋವೆನ್ (ನೆದರ್ಲೆಂಡ್ಸ್): ಭಾರತ ಪುರುಷರ ‘ಎ’ ತಂಡ, ಯುರೋಪ್ ಪ್ರವಾಸದ ಎರಡನೇ ಪಂದ್ಯದಲ್ಲೂ ಐರ್ಲೆಂಡ್ ತಂಡವನ್ನು 6–0 ಗೋಲುಗಳಿಂದ ಸೋಲಿಸಿತು.
ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 6–1 ಗೋಲುಗಳಿಂದ ಜಯಗಳಿಸಿತ್ತು. ಬುಧವಾರದ ಪಂದ್ಯದಲ್ಲೂ ಐರ್ಲೆಂಡ್ ಹೆಚ್ಚು ಪೈಪೋಟಿ ನೀಡಲಿಲ್ಲ.
ಫಾರ್ವರ್ಡ್‌ಗಳಾದ ಉತ್ತಮ್ ಸಿಂಗ್, ಸಂಜಯ್ ಸಿಂಗ್ ಒಂದೊಂದು ಗೋಲು ಗಳಿಸಿದರು. ನಂತರ ಮಿಡ್‌ಫೀಲ್ಡರ್ ರಾಹಿಲ್ ಮೌಸೀನ್ ಎರಡು ಗೋಲು ಗಳಿಸಿ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು. ಅಮನ್‌ದೀಪ್ ಐದನೇ ಮತ್ತು ವರುಣ್ ಕುಮಾರ್ ಅವರು ಮತ್ತೆ ಎರಡು ಗೋಲು ಗಳಿಸಿದರು.
ಭಾರತ ತಂಡವು ಶನಿವಾರ ನಡೆಯುವ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಮಾಜಿ ಅಂತರರಾಷ್ಟ್ರೀಯ ಆಟಗಾರ ಶಿವೇಂದ್ರ ಸಿಂಗ್ ಅವರು ಭಾರತ ತಂಡದ ಕೋಚ್ ಆಗಿದ್ದಾರೆ.
ಭಾರತ ತಂಡವು, ಎರಡು ವಾರಗಳ ಯುರೋಪ್ ಪ್ರವಾಸ ಕೈಗೊಂಡಿದ್ದು ಫ್ರಾನ್ಸ್ ವಿರುದ್ಧ ಪಂದ್ಯದ ನಂತರ ಇಂಗ್ಲೆಂಡ್, ಬೆಲ್ಜಿಯಂ ಮತ್ತು ಆತಿಥೇಯ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.