ADVERTISEMENT

ವಿಶ್ವ ಆರ್ಚರಿ: ಗುರಿತಪ್ಪಿದ ರಿಕರ್ವ್‌ ಬಿಲ್ಗಾರರು

ಏಜೆನ್ಸೀಸ್
Published 10 ಸೆಪ್ಟೆಂಬರ್ 2025, 15:11 IST
Last Updated 10 ಸೆಪ್ಟೆಂಬರ್ 2025, 15:11 IST
ಆರ್ಚರಿ
ಆರ್ಚರಿ   

ಗ್ವಾಂಗ್‌ಜು (ದಕ್ಷಿಣ ಕೊರಿಯಾ): ಭಾರತದ ರಿಕರ್ವ್‌ ಆರ್ಚರಿ ಸ್ಪರ್ಧಿಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆಗೆ ಒಳಗಾದರು. ಮಹಿಳೆಯರ ತಂಡ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಭಾರತ ಬುಧವಾರ ದಕ್ಷಿಣ ಕೊರಿಯಾ ಎದುರು ಸೋಲನುಭವಿಸಿತು.

ಮಿಶ್ರ ತಂಡ ವಿಭಾಗ ಮತ್ತು ಪುರುಷರ ವೈಯಕ್ತಿಕ ರಿಕರ್ವ್‌ ಸ್ಪರ್ಧೆಯಲ್ಲೂ ಭಾರತದ ಸ್ಪರ್ಧಿಗಳು ವಿಫಲರಾದರು. 

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದಶಕದಿಂದ ಎದುರಿಸುತ್ತಿರುವ ಪದಕ ಬರ ಮುಂದುವರಿಯಿತು. ದೀಪಿಕಾ ಕುಮಾರಿ, ಗಾತಾ ಖಡಕೆ ಮತ್ತು ಅಂಕಿತಾ ಭಕತ್ ಅವರು ತಂಡ ವಿಭಾಗದಲ್ಲಿ ಬದ್ಧ ಎದುರಾಳಿ ದಕ್ಷಿಣ ಕೊರಿಯಾ ಎದುರು 3–5 ರಿಂದ ಸೋಲನ್ನು ಕಂಡರು. 

ADVERTISEMENT

ಹತ್ತು ಬಾರಿ ಒಲಿಂಪಿಕ್ ಚಿನ್ನ ಗೆದ್ದಿರುವ ಕೊರಿಯಾದ ತಂಡಕ್ಕೆ ನಿರ್ಣಾಯಕ ಸಂದರ್ಭದಲ್ಲಿ  ಮೂರು ಬಾರಿಯ ಸ್ವರ್ಣ ವಿಜೇತೆ ಆನ್‌ ಸಾನ್‌ ಮತ್ತು ಹಾಲಿ (ಪ್ಯಾರಿಸ್ ಒಲಿಂಪಿಕ್ಸ್) ಚಾಂಪಿಯನ್ ಲಿಮ್ ಸಿ–ಹ್ಯೂಯೆನ್ ನೆರವಿಗೆ ಬಂದರು. 

ಮಿಶ್ರ ತಂಡ ವಿಫಲ:

ದೀಪಿಕಾ ಮತ್ತು ನೀರಜ್ ಚೌಹಾನ್ ಮಿಶ್ರ ತಂಡ ವಿಭಾಗದ 16ರ ಸುತ್ತಿನ ಶೂಟ್‌ ಆಫ್‌ನಲ್ಲಿ ಜಪಾನ್‌ನ ನನಾಮಿ ಅಸಾಕುನೊ – ಯುಕಿ ಕವಾತ ಅವರಿಗೆ ಮಣಿಯಿತು. 31 ವರ್ಷ ವಯಸ್ಸಿನ ದೀಪಿಕಾ ಅವರಿಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಮತ್ತೆ ಕೈತಪ್ಪಿತು.

ರಿಕರ್ವ್ ವಿಭಾಗದಲ್ಲಿ ಭಾರತ 2019ರಿಂದ ಪದಕವನ್ನೇ ಗೆದ್ದಿಲ್ಲ. ಆ ವರ್ಷ ಡೆನ್‌ಬಾಷ್‌ನಲ್ಲಿ (ನೆದರ್ಲೆಂಡ್ಸ್) ನಡೆದ ಚಾಂಪಿಯನ್‌ಷಿಪ್‌ನಲ್ಲಿ ಅತನು ದಾಸ್‌, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್‌ ರಾಯ್ ಅವರನ್ನು ಒಳಗೊಂಡ ತಂಡ ಬೆಳ್ಳಿಯ ಪದಕ ಗೆದ್ದಿತ್ತು.

ಆದರೆ ಕಾಂಪೌಂಡ್‌ ಆರ್ಚರಿ ಸ್ಪರ್ಧಿಗಳು ಪದಕ ಗೆಲ್ಲುವ ಮೂಲಕ ಮುಖಭಂಗ ತಪ್ಪಿಸುತ್ತಿದ್ದಾರೆ. ಈ ಬಾರಿ ಪುರುಷರ ತಂಡ ವಿಭಾಗದಲ್ಲಿ ಮೊದಲ ಬಾರಿ ಚಿನ್ನ ಗೆದ್ದಿರುವ ಭಾರತ, ಮಿಶ್ರ ವಿಭಾಗದಲ್ಲಿ (ರಿಷಭ್ ಯಾದವ್‌– ಜ್ಯೋತಿ ಸುರೇಖಾ ವೆನ್ನಂ) ಬೆಳ್ಳಿ ಗೆದ್ದಿದೆ.

ಪುರುಷರಿಗೆ ಹಿನ್ನಡೆ:‌

ರಿಕರ್ವ್‌ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಯನ್ ಧೀರಜ್ ಬೊಮ್ಮದೇವರ ಮತ್ತು ನೀರಜ್ ಚೌಹಾನ್ ಮೊದಲ ಸುತ್ತಿನಲ್ಲಿ ಹೊರಬಿದ್ದರು. 21 ವರ್ಷ ವಯಸ್ಸಿನ ರಾಹುಲ್‌ ಮೂರನೇ ಸುತ್ತಿನವರೆಗೆ ತಲುಪಿದ್ದೇ ಉತ್ತಮ ಸಾಧನೆಯೆನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.