ADVERTISEMENT

ಏಷ್ಯಾ ಟೀಮ್‌ ಬ್ಯಾಡ್ಮಿಂಟನ್‌ ಟೂರ್ನಿ: ಭಾರತ ತಂಡಗಳಿಗೆ ಸೋಲು

ಪಿಟಿಐ
Published 5 ಫೆಬ್ರುವರಿ 2026, 16:14 IST
Last Updated 5 ಫೆಬ್ರುವರಿ 2026, 16:14 IST
ಭಾರತದ ತನ್ವಿ ಶರ್ಮಾ –ಪಿಟಿಐ ಸಂಗ್ರಹ ಚಿತ್ರ
ಭಾರತದ ತನ್ವಿ ಶರ್ಮಾ –ಪಿಟಿಐ ಸಂಗ್ರಹ ಚಿತ್ರ   

ಕಿಂಗ್ಡಾವೊ: ಹಾಲಿ ಚಾಂಪಿಯನ‌್ ಭಾರತ ಮಹಿಳಾ ತಂಡವು ಏಷ್ಯಾ ಟೀಮ್‌ ಬ್ಯಾಡ್ಮಿಂಟನ್‌ ಟೂರ್ನಿಯ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಗುರುವಾರ ಥಾಯ್ಲೆಂಡ್‌ ಎದುರು 2–3ರಿಂದ ಸೋಲನುಭವಿಸಿತು. ಪುರುಷರ ತಂಡವೂ ಇದೇ ಅಂತರದಲ್ಲಿ ಜಪಾನ್‌ಗೆ ಮಣಿಯಿತು.

ವಿಶ್ವ ಕ್ರಮಾಂಕದಲ್ಲಿ 42ನೇ ಸ್ಥಾನದಲ್ಲಿರುವ ತನ್ವಿ, 21–14, 17–21, 21–18ರಿಂದ ಬುಸಾನನ್‌ ಒಂಗ್‌ಬಮ್ರುಂಗ್‌ಫನ್‌ ಅವರನ್ನು ಮಣಿಸಿದರು. 1 ಗಂಟೆ 3 ನಿಮಿಷ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿ ತಮಗಿಂತಲೂ ಉತ್ತಮ ಕ್ರಮಾಂಕ (16) ಹೊಂದಿರುವ ಆಟಗಾರ್ತಿಗೆ ಆಘಾತ ನೀಡಿದರು. ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಜೋಡಿ 21–14, 20–22, 21–11ರಿಂದ ಟೀಡಾಪ್ರೊನ್‌ ಕ್ಲೀಬ್ಲೀಸನ್‌ ಹಾಗೂ ನತ್ತಮೊನ್‌ ಲೈಸುವಾನ್‌ ಅವರನ್ನು ಮಣಿಸಿತು.

ಆದರೆ, ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ರಕ್ಷಿತಾ ರಾಮರಾಜ್‌ ಅವರು 19–21, 17–21ರಿಂದ ಇಂಡೊನೇಷ್ಯಾ ಮಾಸ್ಟರ್ಸ್‌ ಹಾಲಿ ರನ್ನರ್ಸ್‌ಅಪ್‌  ಪಿಚಮೊನ್‌ ಒಪತ್ನಿಪುಥ್‌ ವಿರುದ್ಧ ಪರಾಭವಗೊಂಡರು. ಡಬಲ್ಸ್‌ನ ಎರಡನೇ ಪಂದ್ಯದಲ್ಲಿ ತನಿಷಾ ಕ್ರಾಸ್ಟೊ– ಶ್ರುತಿ ಮಿಶ್ರಾ ಜೋಡಿಯು 21–19, 14–21, 15–21ರಿಂದ ಹಥೈಥಿಪ್‌ ಮಿಜಾದ್‌ ಹಾಗೂ ನಪಾಪಕ್ರೊನ್‌ ತುಂಗ್‌ಕಸತನ್‌ ಅವರಿಗೆ ಮಣಿಯಿತು.

ADVERTISEMENT

ನಿರ್ಣಾಯಕವಾಗಿದ್ದ ಸಿಂಗಲ್ಸ್‌ ಮೂರನೇ ಪಂದ್ಯದಲ್ಲಿ ಮಾಳವಿಕಾ ಬನ್ಸೋಡ್‌ 18–21, 14–21ರಿಂದ ನೇೆರ ಆಟಗಳಲ್ಲಿ ಪೊರ್ನಪಿಚಾ ಚೊಕೀವಾಂಗ್‌ ವಿರುದ್ಧ ಸೋತರು. ಅದರೊಂದಿಗೆ ಭಾರತ ತಂಡವು 2–3ರಿಂದ ಸೋಲಬೇಕಾಯಿತು.

ಪುರುಷರ ತಂಡಕ್ಕೆ ಸೋಲು: ಜಪಾನ್‌ ವಿರುದ್ಧದ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಕನ್ನಡಿಗ ಆಯುಷ್‌ ಶೆಟ್ಟಿ ಅವರು 21–18, 15–21, 21–11ರಿಂದ ಕೆಂಟಾ ನಿಷಿಮೊಟೊ ಅವರನ್ನು ಮಣಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.

ಡಬಲ್ಸ್‌ನಲ್ಲಿ ವಿಶ್ವದ ಮಾಜಿ ಅಗ್ರಮಾನ್ಯ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು 21–18, 15–21, 21–12ರಿಂದ ಟಕುರೊ ಹೊಕಿ ಹಾಗೂ ಯುಗೊ ಕೊಬಾಯಶಿ ಅವರನ್ನು ಮಣಿಸಿತು. ಭಾರತದ ಮುನ್ನಡೆ 2–0ಗೆ ಹಿಗ್ಗಿತು.

ಆದರೆ, ಸಿಂಗಲ್ಸ್‌ನ ಎರಡನೇ ಪಂದ್ಯದಲ್ಲಿ ಅನುಭವಿ ಆಟಗಾರ ಎಚ‌್.ಎಸ್‌.ಪ್ರಣಯ್‌ ಅವರು 17–21, 11–21ರಲ್ಲಿ ಯುಷಿ ತನಾಕಾ ವಿರುದ್ಧ ಸೋತರು. ಡಬಲ್ಸ್‌ನ ಇನ್ನಂದು ಪಂದ್ಯದಲ್ಲಿ ಹರಿಹರನ್‌ ಅಂಶಕರುಣನ್‌– ಪೃಥ್ವಿ ಕೃಷ್ಣ ಮೂರ್ತಿ ಅವರು 14–21, 10–21ರಿಂದ ಕಕೆರು ಕುಮಗೈ ಹಾಗೂ ಹಿರೊಕಿ ನಿಶಿ ಎದುರು ಪರಾಭವಗೊಂಡರು. ಜಪಾನ್‌ 2–2ರ ಡ್ರಾ ಸಾಧಿಸಿತು.

ನಿರ್ಣಾಯಕವಾಗಿದ್ದ ಸಿಂಗಲ್ಸ್‌ ಮೂರನೇ ಪಂದ್ಯದಲ್ಲಿ ತರುಣ್‌ ಮನ್ನೆಪಲ್ಲಿ ಅವರು ವಿಶ್ವ ಕ್ರಮಾಂಕದಲ್ಲಿ 23ನೇ ಸ್ಥಾನದಲ್ಲಿರುವ ಕೊಕಿ ವತಾನಬೆ ವಿರುದ್ಧ ಸೋತರು. ಜಪಾನ್‌ ಗೆಲುವು ಸಂಭ್ರಮಿಸಿತು.

ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಈಗಾಗಲೇ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.