ನವದೆಹಲಿ: ಭಾರತದ ಶೂಟರ್‌ಗಳು ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.
ಕೂಟದಲ್ಲಿ ಭಾರತ ಎರಡು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಮೂರು ಚಿನ್ನ ಸೇರಿದಂತೆ ನಾಲ್ಕು ಪದಕ ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿದೆ.
ನರೇನ್ ಪ್ರಣವ್ ಮತ್ತು ಖ್ಯಾತಿ ಚೌಧರಿ ಜೋಡಿಯು ಬೆಳ್ಳಿ ಪದಕ ಗೆದ್ದರೆ, ಹಿಮಾಂಶು ಮತ್ತು ಶಾಂಭವಿ ಕ್ಷೀರಸಾಗರ್ ಜೋಡಿಯು ಕಂಚಿನ ಪದಕ ತಮ್ಮದಾಗಿಸಿಕೊಂಡಿತು. ಕೊನೆಯ ದಿನವಾದ ಸೋಮವಾರ ಇನ್ನೆರಡು ವಿಭಾಗಗಳ ಫೈನಲ್‌ಗಳು ನಡೆಯಲಿದ್ದು, ಭಾರತ ಅಗ್ರಸ್ಥಾನದೊಂದಿಗೆ ಅಭಿಯಾನ ಮುಗಿಸುವ ನಿರೀಕ್ಷೆಯಿದೆ.
ಖ್ಯಾತಿ ಮತ್ತು ನರೇನ್ ಜೋಡಿ 38 ತಂಡಗಳಿದ್ದ ಅರ್ಹತಾ ಸುತ್ತಿನಲ್ಲಿ 631.0 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಚೀನಾದ ಹುವಾಂಗ್ ಯುಟಿಂಗ್ ಮತ್ತು ಹುವಾಂಗ್ ಲಿವಾನ್ಲಿನ್ ಜೋಡಿಯು (632.6) ಅಗ್ರಸ್ಥಾನದೊಂದಿಗೆ ಚಿನ್ನದ ಪದಕ ಸುತ್ತಿಗೆ ಮುನ್ನಡೆಯಿತು. ಆದರೆ, ಫೈನಲ್‌ನಲ್ಲಿ ಚೀನಾದ ಶೂಟರ್‌ಗಳು 16–14 ಅಂತರದಲ್ಲಿ ಪಾರಮ್ಯ ಮೆರೆದರು.
ಅರ್ಹತಾ ಸುತ್ತಿನಲ್ಲಿ 629.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಕಂಚಿನ ಪದಕಕ್ಕಾಗಿ ಸ್ಪರ್ಧಿಸಿದ್ದ ಹಿಮಾಂಶು ಮತ್ತು ಶಾಂಭವಿ ಜೋಡಿಯು ಒಂದು ಹಂತದಲ್ಲಿ ಅಮೆರಿಕದ ಗ್ರಿಫಿನ್ ಲೇಕ್ ಮತ್ತು ಎಲಿಜಾ ಸ್ಪೆನ್ಸರ್ ವಿರುದ್ಧ 1-7 ರಿಂದ ಹಿನ್ನಡೆ ಅನುಭವಿಸಿತ್ತು. ಅಮೋಘ ಪುನರಾಗಮನ ಮಾಡಿದ ಭಾರತದ ಜೋಡಿ 17-9 ಅಂತರದಲ್ಲಿ ಗೆದ್ದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.