ADVERTISEMENT

ಭಾರತಕ್ಕೆ ಜೊಹರ್‌ ಕಪ್‌- ಹಾಕಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 15:46 IST
Last Updated 29 ಅಕ್ಟೋಬರ್ 2022, 15:46 IST

ಜೊಹರ್‌ ಬಹ್ರು, ಮಲೇಷ್ಯಾ (ಪಿಟಿಐ): ಸೊಗಸಾದ ಆಟವಾಡಿದ ಭಾರತ ಜೂನಿಯರ್‌ ಹಾಕಿ ತಂಡದವರು ಸುಲ್ತಾನ್‌ ಜೊಹರ್‌ ಕಪ್‌ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಶನಿವಾರ ನಡೆದ ಫೈನಲ್‌ನಲ್ಲಿ ಭಾರತ, ಪೆನಾಲ್ಟಿ ಶೂಟೌಟ್‌ನಲ್ಲಿ 5–4 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. 2013 ಮತ್ತು 2014 ರಲ್ಲಿ ಚಾಂಪಿಯನ್‌ ಆಗಿದ್ದ ಭಾರತ, ಮೂರನೇ ಬಾರಿ ಕಿರೀಟ ಮುಡಿಗೇರಿಸಿಕೊಂಡಿತು. ಮಾತ್ರವಲ್ಲ, ಪ್ರಶಸ್ತಿ ಬರವನ್ನು ನೀಗಿಸಿಕೊಂಡಿತು.

ಜಿದ್ದಾಜಿದ್ದಿನ ಹೋರಾಟ ನಡೆದ ಫೈನಲ್‌ ಪಂದ್ಯದ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 1–1 ಗೋಲಿನಿಂದ ಸಮಬಲ ಸಾಧಿಸಿದ್ದವು. ಸುದೀಪ್‌ ಚಿರ್ಮಾಕೊ 13ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ತಂದಿತ್ತರೆ, ಆಸ್ಟ್ರೇಲಿಯಾದ ಜಾಕ್‌ ಹೊಲಾಡ್ 28 ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸಮಬಲಕ್ಕೆ ಕಾರಣರಾದರು.

ADVERTISEMENT

ಪೆನಾಲ್ಟಿ ಶೂಟೌಟ್‌ನಲ್ಲಿ 3–3 ರಲ್ಲಿ ಸಮಬಲ ಕಂಡುಬಂದ ಕಾರಣ, ವಿಜೇತರನ್ನು ನಿರ್ಣಯಿಸಲು ‘ಸಡನ್‌ ಡೆತ್‌’ನ ಮೊರೆಹೋಗಲಾಯಿತು. ಒತ್ತಡವನ್ನು ಮೆಟ್ಟಿನಿಂತ ಭಾರತ ರೋಚಕ ಜಯ ತನ್ನದಾಗಿಸಿಕೊಂಡಿತು.

ಉತ್ತಮ್‌ ಸಿಂಗ್ ಅವರು ಸಡನ್‌ ಡೆತ್‌ ಸೇರಿದಂತೆ ಶೂಟೌಟ್‌ನಲ್ಲಿ ಎರಡು ಬಾರಿ ಗೋಲು ಗಳಿಸಿದರೆ, ಇತರ ಗೋಲುಗಳನ್ನು ವಿಷ್ಣುಕಾಂತ್‌ ಸಿಂಗ್‌, ಅಂಕಿತ್‌ ಪಾಲ್‌ ಮತ್ತು ಸುದೀಪ್‌ ತಂದಿತ್ತರು.

ಆಸ್ಟ್ರೇಲಿಯಾ ಪರ ಬರ್ನ್ಸ್‌ ಕೂಪರ್, ಫಾಸ್ಟರ್‌ ಬ್ರಾಡೀ, ಬ್ರೂಕ್ಸ್‌ ಜೋಶುವಾ ಮತ್ತು ಹರ್ಟ್‌ ಲಿಯಾಮ್‌ ಗೋಲು ಗಳಿಸಿದರು.

ಭಾರತ ತಂಡ 2012, 2015, 2018 ಮತ್ತು 2019 ರಲ್ಲಿ ‘ರನ್ನರ್ಸ್‌ ಅಪ್‌’ ಆಗಿತ್ತು. 2020 ಮತ್ತು 2021 ರಲ್ಲಿ ಕೋವಿಡ್‌ ಕಾರಣ ಟೂರ್ನಿ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.