ಬಾಕ್ಸಿಂಗ್
(ಸಾಂಕೇತಿಕ ಚಿತ್ರ)
ಲಾ ನುಸಿಯಾ (ಸ್ಪೇನ್): ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೋರ್ಗೊಹೈನ್ ಮತ್ತು ಮಾಜಿ ಯುವ ವಿಶ್ವ ಚಾಂಪಿಯನ್ ಅರುಂಧತಿ ಚೌಧರಿ ಅವರ ನೇತೃತ್ವದಲ್ಲಿ ಭಾರತದ ಬಾಕ್ಸಿಂಗ್ ಪಟುಗಳು ಬಾಕ್ಸಾಮ್ ಎಲೈಟ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಒಂಬತ್ತು ಚಿನ್ನದ ಪದಕಗಳನ್ನು ಗೆದ್ದುಕೊಂಡರು.
ಮಹಿಳಾ ವಿಭಾಗದ ಏಳು ಫೈನಲ್‌ಗಳಲ್ಲಿ ಭಾರತದ ಸ್ಪರ್ಧಿಗಳು ಫೈನಲ್ ತಲುಪಿದ್ದರು. 54 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಪರ್ಧಿಗಳೇ ಇದ್ದರು. ಭಾರತ ಒಟ್ಟು 9 ಚಿನ್ನ, ಮೂರು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಗೆದ್ದು ಟೂರ್ನಿಯ ಅತಿ ಯಶಸ್ವಿ ತಂಡ ಎನಿಸಿತು.
ಬಾಕ್ಸಾಮ್ ಎಲೀಟ್ 2026 ಟೂರ್ನಿಯಲ್ಲಿ 20 ರಾಷ್ಟ್ರಗಳ 200 ಮಂದಿ ಕಣದಲ್ಲಿದ್ದರು. ‘ಈ ಸಾಧನೆಯು ಈ ಕ್ರೀಡೆಯಲ್ಲಿ ಭಾರತ ತನ್ನ ಕಾರ್ಯಯೋಜನೆಯಲ್ಲಿ ಸಾಧಿಸಿರುವ ಪ್ರಗತಿಯ ಸಂಕೇತವಾಗಿದೆ’ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಜು ರಾಣಿ (48 ಕೆ.ಜಿ), ನೀತು (51 ಕೆ.ಜಿ) ಅವರು ಕ್ರಮವಾಗಿ ಸ್ಪೇನ್‌ನ ಮಾರ್ತಾ ಲೋಪೆಝ್ ಮತ್ತು ನೋಲಿಯಾ ಗುಟಿರೆಝ್ ಅವರನ್ನು ಸೋಲಿಸಿ ಚಿನ್ನ ಗೆದ್ದರು. 54 ಕೆ.ಜಿ. ವಿಭಾಗದಲ್ಲಿ ಪೂನಮ್, ಸ್ವದೇಶದ ಪ್ರೀತಿ ಅವರನ್ನು ಸೋಲಿಸಿದರು.
ಪ್ರಿಯಾ (60 ಕೆ.ಜಿ) ಮತ್ತು ಅರುಂಧತಿ (70 ಕೆ.ಜಿ) ಅವರು ಉಕ್ರೇನಿನ ಎದುರಾಳಿಗಳ ವಿರುದ್ಧ 5:0 ಗೆಲುವು ಸಾಧಿಸಿದರು. ಲವ್ಲೀನಾ, ಇಂಗ್ಲೆಂಡ್‌ನ ಮೇರಿ–ಕೇಟ್ ಸ್ಮಿತ್ ಎದುರು 4:1 ಗೆಲುವು ಪಡೆದರು. 80 ಕೆ.ಜಿ. ಫೈನಲ್‌ನಲ್ಲಿ ನೈನಾ ಅವರು ಉಕ್ರೇನಿನ ರೈಸಾ ಪಿಸ್ಕುನ್ ಅವರನ್ನು ಪರಾಭವಗೊಳಿಸಿದರು.
ಭಾರತ ಮಹಿಳಾ ತಂಡದ ಉತ್ತಮ ಪ್ರದರ್ಶನಕ್ಕೆ ಮುಖ್ಯ ಕೋಚ್ ಸ್ಯಾಂಟಿಯಾಗೊ ನೀವಾ ಹರ್ಷ ವ್ಯಕ್ತಪಡಿಸಿದ್ದಾರೆ.
ಪುರುಷರ ವಿಭಾಗದ 60 ಕೆ.ಜಿ. ಫೈನಲ್‌ನಲ್ಲಿ ಸಚಿನ್, ಕೆನಡಾದ ಕಿಯೊಮಾ–ಅಲಿ ಅಲ್ ಅಹಮದಿ ವಿರುದ್ಧ 3:2 ಜಯ ಸಾಧಿಸಿದರು. ಆಕಾಶ್ (75 ಕೆ.ಜಿ) ಅವರು ತೀವ್ರ ಹಣಾಹಣಿಯಲ್ಲಿ ಕಜಾಕಸ್ತಾನದ ಅಮನ್ ಕೊನ್ಸಬೆಕೊವ್ ಎದುರು ಗೆದ್ದು ಭಾರತದ ಪದಕಬೇಟೆಗೆ ಮತ್ತೊಂದು ಚಿನ್ನ ಸೇರಿಸಿದರು.
ದೀಪಕ್ (70 ಕೆ.ಜಿ), ಅಂಕುಶ್ (80 ಕೆ.ಜಿ) ಅವರು ಬೆಳ್ಳಿ ಗೆದ್ದರು. ಫೈನಲ್‌ನಲ್ಲಿ ಕ್ರಮವಾಗಿ ಕಜಾಕಸ್ತಾನ ಮತ್ತು ಉಕ್ರೇನ್ ಎದುರಾಳಿಗಳಿಗೆ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.