ADVERTISEMENT

ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ

ಪಿಟಿಐ
Published 19 ಜುಲೈ 2025, 14:08 IST
Last Updated 19 ಜುಲೈ 2025, 14:08 IST
   

ಸೋಲೊ (ಇಂಡೊನೇಷ್ಯಾ): ಭಾರತ ತಂಡವು, ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್‌ ಮಿಶ್ರ ತಂಡ ಚಾಂಪಿಯನ್‌ಷಿಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಶನಿವಾರ ಯುಎಇ ತಂಡವನ್ನು 110–83ರಿಂದ ಮಣಿಸಿ, ಕ್ವಾರ್ಟರ್‌ ಫೈನಲ್‌ ಟಿಕೆಟ್‌ ಖಚಿತಪಡಿಸಿಕೊಂಡಿತು.

ಬಾಲಕಿಯರ ಸಿಂಗಲ್ಸ್‌ನಲ್ಲಿ ರುಜುಲಾ ರಾಮು ಅವರು 11–5ರಿಂದ ಮೈಶಾ ಖಾನ್‌ ಎದುರು ಗೆದ್ದರು. ಮಿಶ್ರ ಡಬಲ್ಸ್‌ನಲ್ಲಿ ಸಿ. ಲಾಲ್‌ರಾಮ್‌ಸಂಗಾ ಹಾಗೂ ತಾರಿಣಿ ಸೂರಿ ಜೋಡಿಯು ಈ ಅಂತರವನ್ನು 22–11ಕ್ಕೆ ಏರಿಸಿದರು.

ಯುಎಇ ಪ್ರತಿರೋಧ ತೋರಿದರೂ, ಅಂತರವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಭಾರತ ಮಧ್ಯಂತರದ ವೇಳೆಗೆ 55-41ರಿಂದ ಮುಂದಿತ್ತು. ಬಳಿಕ, ಬಾಲಕಿಯರ ಎರಡನೇ ಸಿಂಗಲ್ಸ್‌ ಪಂದ್ಯದಲ್ಲಿ ತನ್ವಿ ಶರ್ಮಾ ಅವರು ಮಧುಮಿತಾ ಸುಂದರಪಾಂಡ್ಯನ್‌ ಅವರನ್ನು ಸೋಲಿಸಿ, ಅಂತರ‌ವನ್ನು 66–46ಕ್ಕೆ ಹಿಗ್ಗಿಸಿದರು.

ADVERTISEMENT

ಮತ್ತೊಂದು ಮಿಶ್ರ ಡಬಲ್ಸ್‌ ಪಂದ್ಯದಲ್ಲಿ ಲಾಲ್‌ರಾಮ್‌ಸಂಗಾ– ರೇಶಿಕಾ ಯು. ಜೋಡಿಯು 11–5ರಿಂದ ಆದಿತ್ಯಾ ಕಿರಣ್‌– ಮೈಶಾ ಜೋಡಿಯನ್ನು ಮಣಿಸಿ, ಅಂತರವನ್ನು 77–51ಕ್ಕೆ ಏರಿಸಿತು. ಅಂತಿಮವಾಗಿ ಭಾರತವು ಜಯವನ್ನು ತನ್ನದಾಗಿಸಿಕೊಂಡು, ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು.

‘ಡಿ’ ಗುಂಪಿನಲ್ಲಿರುವ ಹಾಂಗ್‌ಕಾಂಗ್‌ ಕೂಡ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದೆ. ಭಾನುವಾರ ಭಾರತ ಹಾಗೂ ಹಾಂಗ್‌ಕಾಂಗ್‌ ನಡುವೆ ಪಂದ್ಯ ನಡೆಯಲಿದ್ದು, ಗುಂಪಿನ ಅಗ್ರಸ್ಥಾನ ಪಡೆಯಲು ಪ್ರಬಲ ಪೈಪೋಟಿ ನಡೆಯುವ ನಿರೀಕ್ಷೆ ಇದೆ.

ಈ ಚಾಂಪಿಯನ್‌ಷಿಪ್‌ನಲ್ಲಿ ರಿಲೇ ಪಾಯಿಂಟ್‌ ಮಾದರಿಯ ವ್ಯವಸ್ಥೆ ಅಳವಡಿಸಲಾಗಿದೆ. ತಂಡವೊಂದು ಪಂದ್ಯ ಗೆಲ್ಲಬೇಕಾದರೆ 110 ಪಾಯಿಂಟ್‌ ಗಳಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.