ADVERTISEMENT

ಏಷ್ಯನ್‌ 18 ವರ್ಷದೊಳಗಿನ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಇಂದಿನಿಂದ

ಭಾರತಕ್ಕೆ ‘ಎ’ ವಿಭಾಗಕ್ಕೆ ಬಡ್ತಿಯ ಬಯಕೆ

ವಿಕ್ರಂ ಕಾಂತಿಕೆರೆ
Published 27 ಅಕ್ಟೋಬರ್ 2018, 19:32 IST
Last Updated 27 ಅಕ್ಟೋಬರ್ 2018, 19:32 IST
ಭಾರತ ತಂಡದ ಆಟಗಾರ್ತಿಯರು ಶನಿವಾರ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ
ಭಾರತ ತಂಡದ ಆಟಗಾರ್ತಿಯರು ಶನಿವಾರ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ   

ಬೆಂಗಳೂರು: ಸೀನಿಯರ್‌ ಮತ್ತು ಕಿರಿಯರ ವಿಭಾಗದ ಆಟಗಾರ್ತಿಯರ ಹಾದಿಯಲ್ಲಿ ಸಾಗುವ ಬಯಕೆಯೊಂದಿಗೆ ಭಾರತದ 18 ವರ್ಷದೊಳಗಿನ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದವರು ಕಣಕ್ಕೆ ಇಳಿಯಲಿದ್ದಾರೆ.

ಏಷ್ಯನ್‌ 18 ವರ್ಷದೊಳಗಿನವರ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ ಉದ್ಯಾನ ನಗರಿಯಲ್ಲಿ ಭಾನುವಾರ ಆರಂಭವಾಗಲಿದೆ. ಕಂಠೀರವ ಕ್ರೀಡಾಂಗಣ ಮತ್ತು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ‘ಎ’ ವಿಭಾಗದಲ್ಲಿ ಅಗ್ರ ನಾಲ್ಕು ಸ್ಥಾನ ಗಳಿಸುವ ತಂಡಗಳು ಮುಂದಿನ ವರ್ಷ ಬ್ಯಾಂಕಾಕ್‌ನಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಏಷ್ಯಾವನ್ನು ಪ್ರತಿನಿಧಿಸಲಿವೆ.

ಕಳೆದ ವರ್ಷ ನಡೆದ ಸೀನಿಯರ್ ವಿಭಾಗದಲ್ಲಿ ಭಾರತ ಮಹಿಳಾ ತಂಡದವರು ‘ಬಿ’ ವಿಭಾಗದ ಚಾಂಪಿಯನ್‌ ಆಗಿ ’ಎ’ ವಿಭಾಗಕ್ಕೆ ತೇರ್ಗಡೆ ಹೊಂದಿದ್ದರು. 16 ವರ್ಷದೊಳಗಿನವರ ಮಹಿಳಾ ತಂಡದವರು ಕೂಡ ‘ಎ’ ವಿಭಾಗಕ್ಕೆ ಬಡ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈಗ 18 ವರ್ಷದೊಳಗಿನವರ ಸರದಿ. ಚಾಂಪಿಯನ್‌ಷಿಪ್‌ನಲ್ಲಿ ‘ಬಿ’ ವಿಭಾಗದಲ್ಲಿರುವ ಭಾರತದ ಮಹಿಳೆಯರು ತಮ್ಮ ವಿಭಾಗದಲ್ಲಿ ಚಾಂಪಿಯನ್‌ ಆದರೆ 2020ರ ಚಾಂಪಿಯನ್‌ಷಿಪ್‌ನಲ್ಲಿ ‘ಎ’ ವಿಭಾಗದಿಂದ ಆಡುವ ಅರ್ಹತೆ ಗಳಿಸಲಿದ್ದಾರೆ.

ADVERTISEMENT

ವಿಶ್ವಕಪ್‌, ವಿಶ್ವ ಚಾಂಪಿಯನ್‌ಷಿಪ್‌ನಂಥ ಪ್ರಮುಖ ಟೂರ್ನಿಗಳಲ್ಲಿ ಭಾಗವಹಿಸಲು ಒಮ್ಮೆಯೂ ಆರ್ಹತೆ ಗಳಿಸದಿರುವ ಭಾರತ ತಂಡ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 15 ಬಾರಿ ಪಾಲ್ಗೊಂಡಿದೆ. 1980ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ತಂಡದ ಗರಿಷ್ಠ ಸಾಧನೆ.

ಈ ಬಾರಿ ಗುಂಪು ಹಂತದಲ್ಲಿ ಭಾರತದ ಹಾದಿ ಕಠಿಣವಿಲ್ಲ. ಇರಾನ್‌, ಸಿಂಗಪುರ ಮತ್ತು ಗುವಾಮ್‌ ತಂಡಗಳ ಸವಾಲನ್ನು ಆತಿಥೇಯರು ಸುಲಭವಾಗಿ ಮೆಟ್ಟಿನಿಲ್ಲುವ ಭರವಸೆ ಇದೆ. ಆದರೆ ಅರ್ಹತಾ ಸುತ್ತಿನಲ್ಲಿ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಈ ಹಂತವನ್ನು ಮೀರಿ ನಿಲ್ಲಲು ಸಾಧ್ಯವಾದರೆ ತಂಡ ‘ಎ’ ವಿಭಾಗಕ್ಕೆ ಸುಲಭವಾಗಿ ಬಡ್ತಿ ಪಡೆಯಲಿದೆ.

ಗಾಯದ ಸಮಸ್ಯೆ: ಕನ್ನಡಿಗರಿಗೆ ನಿರಾಸೆ

ಭಾರತ ತಂಡದ ಇಬ್ಬರು ಪ್ರಮುಖ ಆಟಗಾರ್ತಿಯರಾದ ಸಂಜನಾ ರಮೇಶ್ ಮತ್ತು ವೈಷ್ಣವಿ ಯಾದವ್‌ ಮೊಣಕಾಲಿನ ನೋವಿನಿಂದಾಗಿ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿಲ್ಲ. ಇವರಿಬ್ಬರೂ ಕರ್ನಾಟಕದವರು. ನಾಯಕಿ ಪುಷ್ಪಾ ಸೆಂಥಿಲ್ ಕುಮಾರಿ ಕೂಡ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಆದರೆ ಅವರನ್ನು 12 ಮಂದಿಯ ತಂಡದಿಂದ ಕೈಬಿಡಲಿಲ್ಲ.

ಸಂಜನಾ, ವೈಷ್ಣವಿ ಮತ್ತು ಪುಷ್ಪಾ ಕಳೆದ ಬಾರಿ ನಡೆದಿದ್ದ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದರು. ಗಾರ್ಡ್‌ ವಿಭಾಗದಲ್ಲಿ ಆಡುವ ವೈಷ್ಣವಿ, ಟೂರ್ನಿಯ ಉತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. ರೀಬೌಂಡ್‌ಗಳಲ್ಲಿ ಪುಷ್ಪಾ ಮತ್ತು ಬ್ಲಾಕ್‌ನಲ್ಲಿ ಸಂಜನಾ ಅಮೋಘ ಸಾಧನೆ ಮಾಡಿದ್ದರು. ಸಂಜನಾ ಮತ್ತು ವೈಷ್ಣವಿ ಅನುಪಸ್ಥಿತಿಯಲ್ಲಿ ಹರ್ಷಿತಾ ಬೋಪಯ್ಯ ಅವರು ತಂಡದಲ್ಲಿರುವ ಕರ್ನಾಟಕದ ಏಕೈಕ ಅಟಗಾರ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.