ADVERTISEMENT

ಬಾಕ್ಸಿಂಗ್‌: ಅಂತಿಮ ದಿನ ಭಾರತ ‘ಚಿನ್ನ’

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:30 IST
Last Updated 26 ಏಪ್ರಿಲ್ 2019, 20:30 IST

ಬ್ಯಾಂಕಾಕ್‌ (ಪಿಟಿಐ): ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕೊನೆಯ ದಿನದಲ್ಲಿ ಭಾರತ ಚಿನ್ನದ ಪದಕದೊಂದಿಗೆ ಸಂಭ್ರಮಿಸಿತು. ಅಮಿತ್ ಫಂಗಲ್‌ ಮತ್ತು ಪೂಜಾ ರಾಣಿ ಗಳಿಸಿಕೊಟ್ಟ ಪದಕಗೊಳೊಂದಿಗೆ ಭಾರತ ಒಟ್ಟು 13 ಪದಕಗಳನ್ನು ಬಗಲಿಗೆ ಹಾಕಿಕೊಂಡಿತು. ಇದರಲ್ಲಿ ನಾಲ್ಕು ಬೆಳ್ಳಿ ಮತ್ತು ಏಳು ಕಂಚಿನ ಪದಕ ಗಳಿಸಿತು.

ಇದು ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. 2009ರಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಗೆದ್ದಿದ್ದು ಈ ಹಿಂದಿನ ಗರಿಷ್ಠ ಸಾಧನೆಯಾಗಿತ್ತು.

ಕಳೆದ ವರ್ಷ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಫಂಗಲ್‌ ಈ ವರ್ಷದ ಫೆಬ್ರುವರಿಯಲ್ಲಿ ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಜ ಸ್ಮಾರಕ ಟೂರ್ನಿಯಲ್ಲೂ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಹೀಗಾಗಿ ಇಲ್ಲಿ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು.

ADVERTISEMENT

‘ನಿಖರ ಗುರಿಯೊಂದಿಗೆ ಇಲ್ಲಿಗೆ ಬಂದಿದ್ದೆ. ಎಲ್ಲವೂ ಲೆಕ್ಕಾಚಾರದಂತೆ ನಡೆಯಿತು. ಇಲ್ಲಿ ಪಾಲ್ಗೊಂಡ ಎಲ್ಲ ಬೌಟ್‌ಗಳೂ ಖುಷಿ ನೀಡಿವೆ’ ಎಂದು ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿರುವ ಫಂಗಲ್ ಹೇಳಿದರು.

52 ಕೆಜಿ ವಿಭಾಗದಲ್ಲಿ ಫಂಗಲ್ ಗೆದ್ದ ಚೊಚ್ಚಲ ಅಂತರರಾಷ್ಟ್ರೀಯ ಚಿನ್ನ ಇದಾಗಿದೆ. ಈ ಹಿಂದೆ ಅವರು 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು.

ಪೂಜಾರ ಕಳೆದ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. 2014ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ರಾಷ್ಟ್ರೀಯ ಚಾಂಪಿಯನ್‌ ದೀಪಕ್ ಸಿಂಗ್‌ (49 ಕೆಜಿ), ಕವಿಂದರ್ ಬಿಷ್ಠ್‌ (56 ಕೆಜಿ) ಮತ್ತು ಆಶಿಶ್‌ ಕುಮಾರ್ (75 ಕೆಜಿ) ಬೆಳ್ಳಿಗೆ ಮುತ್ತಿಕ್ಕಿದರೆ, ಮಹಿಳಾ ವಿಭಾಗದಲ್ಲಿ ಸಿಮ್ರನ್‌ಜೀತ್ ಕೌರ್‌ (64 ಕೆಜಿ) ಕೂಡ ಬೆಳ್ಳಿ ಗೆದ್ದರು. ಶಿವ ಥಾಪ (60 ಕೆಜಿ), ಆಶಿಶ್‌ (69 ಕೆಜಿ) ಮತ್ತು ಸತೀಶ್ ಕುಮಾರ್ (91+ಕೆಜಿ) ಕಂಚಿನ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.