ADVERTISEMENT

ಥಾಮಸ್‌, ಉಬರ್‌ ಕಪ್ ಬ್ಯಾಡ್ಮಿಂಟನ್‌ ಟೂರ್ನಿ ಭಾರತ ತಂಡಗಳಿಗೆ ಸುಲಭ ಸವಾಲು?

ಥಾಮಸ್‌ ಮತ್ತು ಊಬರ್‌ ಕಪ್‌ ಬ್ಯಾಡ್ಮಿಂಟನ್‌ ಫೈನಲ್‌

ಪಿಟಿಐ
Published 3 ಆಗಸ್ಟ್ 2020, 13:04 IST
Last Updated 3 ಆಗಸ್ಟ್ 2020, 13:04 IST
ಬಿಡಬ್ಲ್ಯುಎಫ್‌ ಲೋಗೊ
ಬಿಡಬ್ಲ್ಯುಎಫ್‌ ಲೋಗೊ   

ನವದೆಹಲಿ: ಥಾಮಸ್‌ ಮತ್ತು ಊಬರ್‌ ಕಪ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿಭಾರತ ತಂಡಗಳು ಸುಲಭ ಸ್ಪರ್ಧೆ ಎನ್ನಬಹುದಾದ ಗುಂಪಿನಲ್ಲಿ ಸ್ಥಾನ ಪಡೆದಿವೆ. ಕ್ವಾಲಾಲಂಪುರದಲ್ಲಿರುವ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಮುಖ್ಯ ಕಚೇರಿಯಲ್ಲಿ ಸೋಮವಾರ ಟೂರ್ನಿಯ ಡ್ರಾ ಪ್ರಕಟವಾಗಿದೆ.

ಪುರುಷರ ತಂಡ ಸಿ ಗುಂಪಿನಲ್ಲಿದ್ದರೆ, ಮಹಿಳಾ ತಂಡ ಡಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಡೆನ್ಮಾರ್ಕ್‌ನ ಅರಾಸ್‌ನಲ್ಲಿ ಅಕ್ಟೋಬರ್‌ 3ರಿಂದ 11ರವರೆಗೆ ಟೂರ್ನಿ ನಿಗದಿಯಾಗಿದೆ. ಪುರುಷರ ತಂಡವಿರುವ ಸಿ ಗುಂಪಿನಲ್ಲಿ 2016ರ ಚಾಂಪಿಯನ್‌ ಡೆನ್ಮಾರ್ಕ್‌, ಜರ್ಮನಿ ಮತ್ತು ಅಲ್ಜೀರಿಯಾ ತಂಡಗಳು ಇವೆ. ಮಹಿಳೆಯರ ವಿಭಾಗದ ಡಿ ಗುಂಪಿನಲ್ಲಿ 14 ಬಾರಿಯ ಚಾಂಪಿಯನ್‌ ಚೀನಾ, ಫ್ರಾನ್ಸ್‌ ಹಾಗೂ ಜರ್ಮನಿ ತಂಡಗಳು ಸ್ಥಾನ ಪಡೆದಿವೆ.

ಭಾರತದ ಎರಡೂ ತಂಡಗಳಿಗೆ ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಲಭಿಸಿದೆ.

ADVERTISEMENT

13 ಬಾರಿಯ ಚಾಂಪಿಯನ್‌ ಇಂಡೊನೇಷ್ಯಾ ತಂಡವು ಪುರುಷರ ವಿಭಾಗದಲ್ಲಿ ಅಗ್ರಶ್ರೇಯಾಂಕ ಪಡೆದಿದೆ. ಮಹಿಳಾ ವಿಭಾಗದಲ್ಲಿ ಜಪಾನ್‌ಗೆ ಈ ಶ್ರೇಯ ಲಭಿಸಿದೆ.

ಪ್ರತಿಷ್ಠಿತ ಟೂರ್ನಿಯು ಮೊದಲು ಮೇ 16ರಿಂದ 24ರವರೆಗೆ ನಿಗದಿಯಾಗಿತ್ತು. ಕೋವಿಡ್‌ ಸೋಂಕು ಪ್ರಕರಣಗಳಲ್ಲಿ ಏರಿಕೆಯಾದ ಕಾರಣ ಆಗಸ್ಟ್‌ 15ರಿಂದ 23ಕ್ಕೆ ಮುಂದೂಡಲಾಗಿತ್ತು. ಅಂತಿಮವಾಗಿ ವೇಳಾಪಟ್ಟಿಯನ್ನು ಮರು ನಿಗದಿ ಮಾಡಿ ಅಕ್ಟೋಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಕೋವಿಡ್‌ನಿಂದ ಉಂಟಾದ ಬಿಕ್ಕಟ್ಟಿನ ಕಾರಣ ಬಿಡಬ್ಲ್ಯುಎಫ್‌, ತಾನು ಆಯೋಜಿಸಬೇಕಾಗಿದ್ದ ಎಲ್ಲ ಟೂರ್ನಿಗಳನ್ನು ಮಾರ್ಚ್‌ನಿಂದ ಸ್ಥಗಿತಗೊಳಿಸಿತ್ತು. ಕೊನೆಯ ಬಾರಿ ನಡೆದ ಟೂರ್ನಿಯೆಂದರೆ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌.

‘ಈ ಋತುವಿನ ಟೂರ್ನಿಗಳಿಗೆ ಹಲವು ಬಾರಿ ಅಡೆತಡೆಗಳು ಎದುರಾಗಿವೆ. ಕೋವಿಡ್‌ಗೆ ಸಂಬಂಧಿಸಿದಂತೆ ಸದ್ಯದ ಬೆಳವಣಿಗೆಗಳನ್ನು ಫೆಡರೇಷನ್‌ ಗಮನಿಸುತ್ತಿದೆ. ಸುರಕ್ಷಿತ ವಾತಾವರಣದಲ್ಲಿ ಟೂರ್ನಿಗಳನ್ನು ಪುನರಾರಂಭಿಸಲು ಯೋಜಿಸಿದ್ದೇವೆ‘ ಎಂದು ಬಿಡಬ್ಲ್ಯುಎಫ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟುವರ್ಟ್‌ ಬೊರ್ರಿ ಹೇಳಿದ್ದಾರೆ.

ಥಾಮಸ್‌ ಮತ್ತು ಊಬರ್‌ ಕಪ್ ಫೈನಲ್‌‌ ಟೂರ್ನಿಯಲ್ಲಿ ಪ್ರತಿ ಗುಂಪಿನಿಂದ ಅಗ್ರಸ್ಥಾನ ಪಡೆದ ಎರಡು ತಂಡಗಳು ನಾಕೌಟ್‌ ಸುತ್ತಿಗೆ ಅರ್ಹತೆ ಪಡೆಯಲಿವೆ.

2018ರ ಆವೃತ್ತಿಯಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ನಾಕೌಟ್‌ ಹಂತ ತಲುಪಲು ವಿಫಲವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.