ADVERTISEMENT

ಕಬಡ್ಡಿ: ಭಾರತಕ್ಕೆ ಪ್ರಶಸ್ತಿ ಸಂಭ್ರಮ

ಕಬಡ್ಡಿ: ಮೋನು ಗೋಯತ್‌, ಸುರ್ಜೀತ್ ಮಿಂ‌ಚು

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 19:28 IST
Last Updated 30 ಜೂನ್ 2018, 19:28 IST
ದುಬೈನಲ್ಲಿ ಶನಿವಾರ ಮುಕ್ತಾಯಗೊಂಡ ಕಬಡ್ಡಿ ಮಾಸ್ಟರ್ಸ್ ಟೂರ್ನಿಯ ಪ್ರಶಸ್ತಿ ಗೆದ್ದ ಭಾರತ ತಂಡದ ಆಟಗಾರರ ಸಂಭ್ರಮ
ದುಬೈನಲ್ಲಿ ಶನಿವಾರ ಮುಕ್ತಾಯಗೊಂಡ ಕಬಡ್ಡಿ ಮಾಸ್ಟರ್ಸ್ ಟೂರ್ನಿಯ ಪ್ರಶಸ್ತಿ ಗೆದ್ದ ಭಾರತ ತಂಡದ ಆಟಗಾರರ ಸಂಭ್ರಮ   

ದುಬೈ (ಪಿಟಿಐ): ನಾಯಕ ಅಜಯ್‌ ಠಾಕೂರ್‌ (ಒಂಬತ್ತು ಪಾಯಿಂಟ್) ಮತ್ತು ಯುವ ಆಟಗಾರ ಮೋನು ಗೋಯಟ್‌ (ಆರು ಪಾಯಿಂಟ್‌) ಇಲ್ಲಿನ ಅಲ್‌ ವಾಸಲ್‌ ಕ್ರೀಡಾ ಸಂಕೀರ್ಣದಲ್ಲಿ ಮಿಂಚಿದರು. ಅವರ ಅಮೋಘ ರೈಡಿಂಗ್ ನೆರವಿನಿಂದ ಭಾರತ ತಂಡ ಕಬಡ್ಡಿ ಮಾಸ್ಟರ್ಸ್‌ ಟೂರ್ನಿಯ ಪ್ರಶಸ್ತಿ ಬಗಲಿಗೆ ಹಾಕಿಕೊಂಡಿತು.

ಇಲ್ಲಿ ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವು ಇರಾನ್‌ ವಿರುದ್ಧ 44–26ರಿಂದ ಗೆದ್ದಿತು.

ವಿಶ್ವ ಚಾಂಪಿಯನ್‌ ಭಾರತ ಮತ್ತು ರನ್ನರ್ ಅಪ್‌ ಇರಾನ್‌ ನಡುವಿನ ಹಣಾಹಣಿ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಭಾರತವು ಇರಾನ್‌ಗೆ ಯಾವುದೇ ಸಂದರ್ಭದಲ್ಲಿ ಹಿಡಿತ ಸಾಧಿಸಲು ಅವಕಾಶ ನೀಡಲಿಲ್ಲ.

ADVERTISEMENT

ಠಾಕೂರ್‌ ಮತ್ತು ಗೋಯತ್‌ ನಿರಂತರವಾಗಿ ಪಾಯಿಂಟ್‌ಗಳನ್ನು ಗಳಿಸಿದರೆ, ರಕ್ಷಣಾ ವಿಭಾಗದ ಚುಕ್ಕಾಣಿ ಹಿಡಿದಿದ್ದ ಸುರ್ಜೀತ್‌ ಸಿಂಗ್‌ ಟ್ಯಾಕ್ಲಿಂಗ್ ಮೂಲಕ ಮಿಂಚಿದರು. ಅವರು ಒಟ್ಟು ಏಳು ಪಾಯಿಂಟ್ ಕಲೆ ಹಾಕಿದರು.

ಭಾರತಕ್ಕೆ ಮೊದಲ ಪಾಯಿಂಟ್ ಗಳಿಸಿಕೊಟ್ಟವರು ಅಜಯ್ ಠಾಕೂರ್‌. ನಂತರ ಆಧಿಪತ್ಯ ಸ್ಥಾಪಿಸಿದ ತಂಡ 15–5ರಿಂದ ಮುನ್ನಡೆಯಿತು. ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ವಿದ್ಯುತ್ ಕೈ ಕೊಟ್ಟ ಕಾರಣ ಪಂದ್ಯ 10 ನಿಮಿಷ ಸ್ಥಗಿತಗೊಂಡಿತು. ಪಂದ್ಯ ಪುನಃ ಆರಂಭವಾದ ನಂತರ ಇರಾನ್ ತಿರುಗೇಟು ನೀಡಿತು. ಹೀಗಾಗಿ ಭಾರತದ ಮುನ್ನಡೆ 18–11ಕ್ಕೆ ಇಳಿಯಿತು.

ಮಧ್ಯಂತರ ಅವಧಿಯ ನಂತರ ಮತ್ತೆ ಎದುರಾಳಿ ತಂಡವನ್ನು ದಂಗುಬಡಿಸಿದ ಭಾರತವು ಇರಾನ್‌ ತಂಡವನ್ನು ಆಲ್‌ ಔಟ್ ಮಾಡುವ ಮೂಲಕ ಮುನ್ನಡೆಯನ್ನು 24–12ಕ್ಕೆ ಏರಿಸಿತು. ಏಳು ನಿಮಿಷಗಳಲ್ಲಿ ಒಂದು ಪಾಯಿಂಟ್ ಬಿಟ್ಟುಕೊಟ್ಟ ಭಾರತ 29–14ರಿಂದ ಮುನ್ನಡೆಯಿತು. ನಂತರ 35–19, 37–21ರಿಂದ ಮುನ್ನಡೆದ ಅಜಯ್‌ ಠಾಕೂರ್‌ ಬಳಗ ಹಿಂತಿರುಗಿ ನೋಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.