ADVERTISEMENT

ನಾಲ್ಕು ದಶಕಗಳ ಕನಸು ನನಸಾದೀತೆ?

ಜೂನಿಯರ್ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಏಳು ಮಂದಿಗೆ ಅವಕಾಶ ನೀಡಿದ ಅಡಳಿತ

ಪಿಟಿಐ
Published 27 ನವೆಂಬರ್ 2018, 19:35 IST
Last Updated 27 ನವೆಂಬರ್ 2018, 19:35 IST
ಭಾರತ ತಂಡದ ಆಟಗಾರರು ಶುಭಾರಂಭದ ವಿಶ್ವಾಸದಲ್ಲಿದ್ದಾರೆ
ಭಾರತ ತಂಡದ ಆಟಗಾರರು ಶುಭಾರಂಭದ ವಿಶ್ವಾಸದಲ್ಲಿದ್ದಾರೆ   

ಭುವನೇಶ್ವರ: ಒಗ್ಗಟ್ಟಿನ ಬಲವಿದೆ, ಗೆಲ್ಲುವ ಛಲ ಇದೆ; ತವರಿನ ಪ್ರೇಕ್ಷಕರ ಬೆಂಬಲದ ಶಕ್ತಿಯೂ ಇದೆ. ಇದೆಲ್ಲವನ್ನೂ ಹೊಂದಿರುವ ಭಾರತ ತಂಡ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಎದುರಾಳಿ ತಂಡಗಳನ್ನು ಮಟ್ಟಹಾಕಲು ಸಜ್ಜಾಗಿದೆ.

ಬುಧವಾರ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ವಿಶ್ವಕಪ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. 1975ರಲ್ಲಿ ಅಜಿತ್‌ ಪಾಲ್ ಸಿಂಗ್‌ ನೇತೃತ್ವದ ತಂಡ ಚಿನ್ನ ಗೆದ್ದ ನಂತರ ಈ ವರೆಗೆ ಚಾಂಪಿಯನ್‌ ಪಟ್ಟ ಏರಲು ಆಗದ ತಂಡ 43 ವರ್ಷಗಳ ಕೊರಗನ್ನು ನೀಗಿಸಲು ಈ ಬಾರಿ ಟೊಂಕ ಕಟ್ಟಿ ನಿಂತಿದೆ.

ರ‍್ಯಾಂಕಿಂಗ್‌ನಲ್ಲಿ ತನಗಿಂತ 10 ಸ್ಥಾನ ಕೆಳಗಿರುವ ದಕ್ಷಿಣ ಆಫ್ರಿಕಾವನ್ನು ಮಣಿಸುವ ಮೂಲಕ ಅಭಿಯಾನದ ಶುಭಾರಂಭ ಮಾಡಲು ಭಾರತ ಸಜ್ಜಾಗಿದೆ. ’ಸಿ’ ಗುಂಪಿನಲ್ಲಿರುವ ತಂಡ ಡಿಸೆಂಬರ್‌ ಎರಡರಂದು ಬೆಲ್ಜಿಯಂ ಮತ್ತು ಡಿಸೆಂಬರ್ ಎಂಟರಂದು ಕೆನಡಾವನ್ನು ಎದುರಿಸಲಿದೆ.

ADVERTISEMENT
ಉದ್ಘಾಟನಾ ಸಮಾರಂಭದ ವೇಳೆ ಕಳಿಂಗ ಕ್ರೀಡಾಂಗಣ ವಿದ್ಯುದ್ದೀಪಗಳಿಂದ ಝಗಮಗಿಸಿತು -ಟ್ವಿಟರ್‌ ಚಿತ್ರ

ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಚಿನ್ನ ಗೆದ್ದಿರುವ ಭಾರತಕ್ಕೆ ವಿಶ್ವಕಪ್‌ ನಲ್ಲಿ ಒಮ್ಮೆ ಮಾತ್ರ ಚಿನ್ನದ ಸಾಧನೆ ಮಾಡಲು ಸಾಧ್ಯವಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ನೆದರ್ಲೆಂಡ್ಸ್‌, ಜರ್ಮನಿ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ ಮೇಲೆ ಆಧಿಪತ್ಯ ಸ್ಥಾಪಿಸಿವೆ. ತವರಿನಲ್ಲಿ 1982ರಲ್ಲಿ ಟೂರ್ನಿ ನಡೆದಾಗಲೂ ಭಾರತಕ್ಕೆ ಗಮನ ಸೆಳೆಯಲು ಆಗಲಿಲ್ಲ. ಆಗ ಆತಿಥೇಯರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2010ರಲ್ಲೂ ತವರಿನಲ್ಲಿ ನಿರಾಸೆ ಕಂಡಿತ್ತು. ಆ ವರ್ಷ ಭಾರತ ಎಂಟನೇ ಸ್ಥಾನ ಗಳಿಸಿತ್ತು.

ಹಾದಿ ಕಠಿಣ: ಸೆಮಿಫೈನಲ್ ತಲುಪುವುದು ಭಾರತ ತಂಡದ ಈ ಬಾರಿಯ ಮೊದಲ ಗುರಿ. ಆದರೆ ಇದನ್ನು ಸಾಧಿಸುವುದು ಸುಲಭವಲ್ಲ. ಗುಂಪು ಹಂತದ ಹಾದಿ ಸುಲಭವಾಗಿದ್ದರೂ ಕ್ರಾಸ್ ಓವರ್‌ ಅಥವಾ ನಾಕೌಟ್ ಹಂತದ ಪಂದ್ಯಗಳಲ್ಲಿ ಎರಡು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ, ನೆದರ್ಲೆಂಡ್ಸ್‌, ಜರ್ಮನಿ ಮತ್ತು ಒಲಿಂಪಿಕ್‌ ಚಾಂಪಿಯನ್‌ ಅರ್ಜೆಂಟೀನಾದ ಸವಾಲನ್ನು ಭಾರತ ಎದುರಿಸಬೇಕಾಗಿದೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಆಗದ ತಂಡ ಈಗ ಒತ್ತಡದಲ್ಲಿದೆ. ಆದರೆ ಈ ಟೂರ್ನಿಯಲ್ಲಿ ತಂಡ ಮಾಡು ಇಲ್ಲ ಮಡಿ ಸ್ಥಿತಿಯಲ್ಲಿರುವುದರಿಂದ ಪ್ರಬಲ ‍ಪೈಪೋಟಿ ಒಡ್ಡಿ ಗೆಲುವಿನ ಸೌಧ ಕಟ್ಟುವ ನಿರೀಕ್ಷೆ ಇದೆ. ಮುಖ್ಯ ಕೋಚ್ ಹರೇಂದ್ರ ಸಿಂಗ್ ಅವರಿಗೂ ಇದು ನಿರ್ಣಾಯಕ ಟೂರ್ನಿಯಾಗಿದ್ದು ತಂಡ ಉತ್ತಮ ಸಾಮರ್ಥ್ಯ ತೋರಲು ವಿಫಲರಾದರೆ ಅವರ ತಲೆದಂಡ ಖಚಿತವಾಗಲಿದೆ.

ಭಾರತಕ್ಕೆ ಜೂನಿಯರ್ ವಿಶ್ವಕಪ್ ಗೆಲ್ಲಿಸಿಕೊಟ್ಟ ಹರೇಂದ್ರ ಸಿಂಗ್‌ ಆ ತಂಡದಲ್ಲಿದ್ದ 18 ಆಟಗಾರರ ಪೈಕಿ ಏಳು ಮಂದಿಯನ್ನು ಈಗ ತರಬೇತುಗೊಳಿಸಿದ್ದಾರೆ. ಅವರೊಂದಿಗೆ ಅನುಭವಿ ಆಟಗಾರರಾದ ನಾಯಕ ಮನಪ್ರೀತ್ ಸಿಂಗ್‌, ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್‌, ಆಕಾಶದೀಪ್ ಸಿಂಗ್‌ ಮತ್ತು ಬೀರೇಂದ್ರ ಲಾಕ್ರ ಕೂಡ ಇದ್ದಾರೆ. ಆದರೆ ಡ್ರ್ಯಾಗ್ ಫ್ಲಿಕ್ಕರ್‌ ರೂಪಿಂದರ್ ಪಾಲ್‌ ಸಿಂಗ್‌ ಮತ್ತು ಎಸ್‌.ವಿ.ಸುನಿಲ್ ಅವರ ಅನುಪಸ್ಥಿತಿ ತಂಡವನ್ನು ಕಾಡಲಿದೆ. ರೂಪಿಂದರ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು ಸುನಿಲ್ ಫಿಟ್ ಇಲ್ಲದ ಕಾರಣತಂಡದಲ್ಲಿಲ್ಲ.

ಸ್ವಂತ ವೆಚ್ಚದಲ್ಲಿ ಬಂದ ಆಟಗಾರರು

ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿ ಟೂರ್ನಿಗೆ ಬಂದಿದ್ದಾರೆ.

ದೇಶದಲ್ಲಿ ಹಾಕಿ ಕ್ರೀಡೆಗೆ ಸಾಕಷ್ಟು ಆರ್ಥಿಕ ನೆರವು ಸಿಗದೇ ಇರುವುದರಿಂದ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ಕೊಚ್‌ ಮಾರ್ಕ್ ಹಾಪ್ಕಿನ್ಸ್ ತಿಳಿಸಿದ್ದಾರೆ.

‘ಹಣಕಾಸಿನ ಕೊರತೆಯಿಂದಾಗಿ ತಂಡಕ್ಕೆ ಹೆಚ್ಚು ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ ಆಗಿದೆ. ಹೀಗಾಗಿ ದೇಶದಲ್ಲಿ ಹಾಕಿ ಕ್ರೀಡೆ ಬೆಳೆಯುತ್ತಿಲ್ಲ’ ಎಂದು ಅವರು ಹೇಳಿದರು.

**

ಬೆಲ್ಜಿಯಂ ಕಠಿಣ ಸವಾಲು

16 ರಾಷ್ಟ್ರಗಳ ಟೂರ್ನಿಯ ಗುಂಪು ಹಂತದಲ್ಲಿ ಭಾರತಕ್ಕೆ ಬೆಲ್ಜಿಯಂ ತಂಡದಿಂದ ಕಠಿಣ ಸವಾಲು ಎದುರಾಗಲಿದೆ. ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬೆಲ್ಜಿಯಂ ಅನ್ನು ಸೋಲಿಸಿದರೆ ನೇರವಾಗಿ ಕ್ವಾರ್ಟರ್ ಫೈನಲ್‌ ಹಂತಕ್ಕೇರುವ ಭಾರತದ ಆಸೆ ಗರಿಗೆದರಲಿದೆ.

2002ರ ನಂತರ ಇದೇ ಮೊದಲ ಬಾರಿ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳುತ್ತಿವೆ. ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದು ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸುವ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಎರಡು ಮತ್ತು ಮೂರನೇ ಸ್ಥಾನ ಗಳಿಸುವ ತಂಡಗಳು ನಾಕೌಟ್ ಹಂತಕ್ಕೇರಬೇಕಾದರೆ ಕ್ರಾಸ್ ಓವರ್ ಪಂದ್ಯಗಳನ್ನು ಆಡಬೇಕು.

**

18 ವರ್ಷದವರೇ ಹೆಚ್ಚು ಇದ್ದಾರೆ ಎಂಬ ಕಾರಣಕ್ಕೆ ಭಾರತ ತಂಡವನ್ನು ಯುವ ಆಟಗಾರರ ತಂಡ ಎಂದು ಹೇಳಲಾಗದು. ಇದು ಅನುಭವಿ ಆಟಗಾರರ ತಂಡವಾಗಿದ್ದು ಇತಿಹಾಸ ಸೃಷ್ಟಿಸಲಿದೆ.
-ಹರೇಂದ್ರ ಸಿಂಗ್‌, ಭಾರತ ತಂಡದ ಕೋಚ್‌

**

ಇಂದಿನ ಪಂದ್ಯಗಳು (ಸಿ ಗುಂಪು)

ಬೆಲ್ಜಿಯಂ– ಕೆನಡಾ

ಪಂದ್ಯ ಆರಂಭ: ಸಂಜೆ 5ಕ್ಕೆ

**

ಭಾರತ –ದಕ್ಷಿಣ ಆಫ್ರಿಕಾ

ಪಂದ್ಯ ಆರಂಭ: ರಾತ್ರಿ 7ಕ್ಕೆ

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.