ADVERTISEMENT

ತಂಡಕ್ಕೆ ಮರಳಿದ ಕನ್ನಡಿಗ ಸುನೀಲ್‌

ಒಲಿಂಪಿಕ್‌ ಟೆಸ್ಟ್‌ಗೆ ಭಾರತ ಪುರುಷರ ಹಾಕಿ ತಂಡ: ನಾಯಕ ಮನಪ್ರೀತ್‌, ಶ್ರೀಜೇಶ್‌ಗೆ ವಿಶ್ರಾಂತಿ

ಪಿಟಿಐ
Published 25 ಜುಲೈ 2019, 19:45 IST
Last Updated 25 ಜುಲೈ 2019, 19:45 IST
ಎಸ್‌.ವಿ.ಸುನಿಲ್‌
ಎಸ್‌.ವಿ.ಸುನಿಲ್‌   

ನವದೆಹಲಿ: ಗಾಯದಿಂದ ಗುಣಮುಖರಾಗಿರುವ ಕರ್ನಾಟಕದ ಅನುಭವಿ ಆಟಗಾರ ಎಸ್‌.ವಿ.ಸುನೀಲ್‌, ಭಾರತ ತಂಡಕ್ಕೆ ಮರಳಿದ್ದಾರೆ.

ಮುಂಬರುವ ಒಲಿಂಪಿಕ್ ಟೆಸ್ಟ್‌ಗೆ ಹಾಕಿ ಇಂಡಿಯಾ (ಎಚ್‌ಐ) ಗುರುವಾರ ಪ್ರಕಟಿಸಿರುವ 18 ಸದಸ್ಯರ ತಂಡದಲ್ಲಿ ಸ್ಟ್ರೈಕರ್‌ ಸುನೀಲ್‌ ಸ್ಥಾನ ಪಡೆದಿದ್ದಾರೆ.

ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸುನೀಲ್‌, ಒಂಬತ್ತು ತಿಂಗಳು ತಂಡದಿಂದ ದೂರ ಉಳಿದಿದ್ದರು.

ADVERTISEMENT

ನಾಯಕ ಮನಪ್ರೀತ್‌ ಸಿಂಗ್‌, ಹಿರಿಯ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಮತ್ತು ಅನುಭವಿ ಡಿಫೆಂಡರ್‌ ಸುರೇಂದರ್‌ ಕುಮಾರ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಡ್ರ್ಯಾಗ್‌ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ತಂಡದ ನಾಯಕರಾಗಿ ನೇಮಕವಾಗಿದ್ದು, ಸ್ಟ್ರೈಕರ್‌ ಮನದೀಪ್‌ ಸಿಂಗ್‌ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ಆಶಿಶ್‌ ಟೊಪ್ನೊ ಮತ್ತು ಶಂಷೇರ್‌ ಸಿಂಗ್‌ ಅವರು ಮೊದಲ ಸಲ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಅನುಭವಿ ಡ್ರ್ಯಾಗ್‌ಫ್ಲಿಕ್ಕರ್‌ ರೂಪಿಂದರ್‌ ಪಾಲ್‌ ಸಿಂಗ್‌, ಬೀರೇಂದ್ರ ಲಾಕ್ರಾ ಮತ್ತು ಆಕಾಶ್‌ದೀಪ್‌ ಸಿಂಗ್‌ ಅವರಿಗೆ ‘ಕೊಕ್‌’ ನೀಡಲಾಗಿದೆ.

ಒಲಿಂಪಿಕ್‌ ಟೆಸ್ಟ್‌, ಆಗಸ್ಟ್‌ 17ರಿಂದ 21ರವರೆಗೆ ಜಪಾನ್‌ನ ಟೋಕಿಯೊದಲ್ಲಿ ನಿಗದಿಯಾಗಿದೆ.

‘ಈ ವರ್ಷದ ನವೆಂಬರ್‌ನಲ್ಲಿ ಒಲಿಂಪಿಕ್ಸ್‌ ಅರ್ಹತಾ ಟೂರ್ನಿ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ’ ಎಂದು ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ತಿಳಿಸಿದ್ದಾರೆ.

‘ಒಲಿಂಪಿಕ್ಸ್‌ ಕೂಟ ಮುಂದಿನ ವರ್ಷ ಟೋಕಿಯೊದಲ್ಲಿ ಆಯೋಜನೆಯಾಗಿದೆ. ಅದಕ್ಕೂ ಮುನ್ನ ಟೋಕಿಯೊ ಪರಿಸ್ಥಿತಿಯನ್ನು ಅರಿಯಲು ನಮ್ಮ ಆಟಗಾರರಿಗೆ ಒಲಿಂಪಿಕ್‌ ಟೆಸ್ಟ್‌ ಸಹಕಾರಿಯಾಗಲಿದೆ. ತಮ್ಮೊಳಗಿನ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಲು ಯುವ ಆಟಗಾರರಿಗೆ ಈ ಟೂರ್ನಿ ವೇದಿಕೆಯಾಗಲಿದೆ’ ಎಂದಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್‌: ಕೃಷ್ಣ ಬಹದ್ದೂರ್‌ ಪಾಠಕ್‌ ಮತ್ತು ಸೂರಜ್‌ ಕರ್ಕೇರಾ. ಗುರಿಂದರ್‌ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌ (ನಾಯಕ), ಕೊಥಾಜಿತ್‌ ಸಿಂಗ್‌, ಹಾರ್ದಿಕ್‌ ಸಿಂಗ್‌, ನೀಲಕಂಠ ಶರ್ಮಾ, ವಿವೇಕ್‌ ಸಾಗರ್‌ ಪ್ರಸಾದ್‌, ಜಸ್‌ಕರಣ್‌ ಸಿಂಗ್‌, ಮನದೀಪ್‌ ಸಿಂಗ್‌ (ಉಪ ನಾಯಕ), ಗುರ್‌ಸಾಹೀಬ್‌ಜೀತ್‌ ಸಿಂಗ್‌, ನೀಲಂ ಸಂಜೀಪ್‌ ಕ್ಸೆಸ್‌, ಜರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಆಶಿಶ್‌ ಟೊಪ್ನೊ, ಎಸ್‌.ವಿ.ಸುನೀಲ್‌, ಗುರ್ಜಂತ್‌ ಸಿಂಗ್‌ ಮತ್ತು ಶಂಷೇರ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.